ADVERTISEMENT

700 ಕಿ.ಮೀ. ಪಾದಯಾತ್ರೆ: ಪ್ರಣವಾನಂದ ಶ್ರೀ

ಈಡಿಗ ಬಿಲ್ಲವ, ನಾಮಧಾರಿ ಸೇರಿ 26 ಪಂಗಡಗಳ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:27 IST
Last Updated 18 ನವೆಂಬರ್ 2025, 7:27 IST
ಪ್ರಣವಾನಂದ ಶ್ರೀ
ಪ್ರಣವಾನಂದ ಶ್ರೀ   

ಮಂಗಳೂರು: ಈಡಿಗ ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿದಂತೆ 26 ಪಂಗಡಗಳನ್ನು ಹೊಂದಿರುವ ಸಮಾಜದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಲಬುರಗಿ ಜಿಲ್ಲೆ ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಶಕ್ತಿಪೀಠದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಜನವರಿ 6ರಿಂದ ಈ ಪಾದಯಾತ್ರೆ ಆರಂಭಗೊಳ್ಳಲಿದ್ದು,  41 ದಿನಗಳಲ್ಲಿ 700 ಕಿ.ಮೀ. ಕ್ರಮಿಸಲಿದೆ. ಫೆ.12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ನಡೆಯಲಿದೆ ಎಂದರು.

ಈ ಪಾದಯಾತ್ರೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪೂರ್ವಭಾವಿ ಸಭೆಯನ್ನು ಡಿ.7ರಂದು ಮಂಗಳೂರಿನ ಕುದ್ರೋಳ್ಳಿಯಲ್ಲಿ ನಡೆಸಲಾಗುವುದು.  ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ವರ್ಷಕ್ಕೆ ₹250 ಕೋಟಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಿದ್ದರೂ ಅವರಿಗೆ ನೇಮಕಾತಿ ಆದೇಶ ನೀಡಿಲ್ಲ. ನಿಗಮಕ್ಕೆ ಅನುದಾನವನ್ನೂ ನೀಡಿಲ್ಲ. ನಿಗಮಕ್ಕೆ ವರ್ಷಕ್ಕೆ ₹500 ಕೋಟಿ ಬಿಡುಗಡೆ ಮಾಡಬೇಕು. ಬೆಂಗಳೂರಿನ ವಿಧಾನಸೌಧದ ಎದುರು ನಾರಾಯಣಗುರುಗಳ ಪ್ರತಮೆ ಸ್ಥಾಪಿಸಬೇಕು ಎಂಬುದು ಸೇರಿದಂತೆ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಮೂರನೇ ಹಂತದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

ADVERTISEMENT

ವಿಶೇಷ ಸೌಲಭ್ಯ ಕೊಡಿ: ವಿಮಾನ ನಿಲ್ದಾಣಗಳಲ್ಲಿ ಸ್ವಾಮೀಜಿ ಅವರು ಸಾಮಾನ್ಯರ ಸಾಲಿನಲ್ಲಿ ಹೋಗಬೇಕಿದೆ. ಅವರಿಗೂ ಶಿಷ್ಟಾಚಾರ ಸೌಲಭ್ಯ ಕಲ್ಪಿಸಬೇಕು ಮತ್ತು ಹೆದ್ದಾರಿಗಳ ಟೋಲ್‌ಗಳಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ನವೀನ್‌ ಸುರತ್ಕಲ್‌ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.