ADVERTISEMENT

ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ: ಪುತ್ತೂರು ನಗರ ಸಂಪೂರ್ಣ ಸ್ತಬ್ಧ

ಜನರ ಓಡಾಟ ವಿರಳ; ವಾಹನ ಸಂಚಾರ ಕಡಿಮೆ: ಈಶ್ವರಮಂಗಲ, ಬೆಟ್ಟಂಪಾಡಿ, ಪಾಣಾಜೆ ಪೇಟೆಯಲ್ಲೂ ಬಂದ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 12:48 IST
Last Updated 27 ಜುಲೈ 2022, 12:48 IST
ಜನ ಮತ್ತು ವಾಹನ ಸಂಚಾರವಿಲ್ಲದೆ ಖಾಲಿಯಾಗಿದ್ದ ಪುತ್ತೂರು ನಗರ
ಜನ ಮತ್ತು ವಾಹನ ಸಂಚಾರವಿಲ್ಲದೆ ಖಾಲಿಯಾಗಿದ್ದ ಪುತ್ತೂರು ನಗರ   

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಬಂದ್ ಕರೆಗೆ ಪುತ್ತೂರು ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಅಂಗಡಿಗಳು ಸಂಪೂರ್ಣ ಬಂದ್ ಆದ ಕಾರಣ ನಗರದಲ್ಲಿ ಜನಜೀವನ ಸ್ತಬ್ಧಗೊಂಡಿದೆ.‌

ಪುತ್ತೂರು ನಗರದಲ್ಲಿ ಮೆಡಿಕಲ್ ಶಾಪ್‌, ಆಸ್ಪತ್ರೆ, ಹಾಲು ಮಾರಾಟದ ಅಂಗಡಿ ಮತ್ತು ಕೆಲವು ತರಕಾರಿ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಬಂದ್ ಆಗಿದ್ದವು. ಎಲ್ಲ ಸಮುದಾಯದವರು ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಿದ್ದರು. ನಗರದಲ್ಲಿ ಜನರ ಓಡಾಟ ವಿರಳವಾಗಿತ್ತು. ಗ್ರಾಮೀಣ ಭಾಗಗಳಿಂದ ನಗರಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗಿತ್ತು.

ಬಸ್ಸಿಗೆ ಕಲ್ಲೆಸೆತ: ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ಗೆ ನಗರದ ಬೊಳುವಾರು ಸಮೀಪ ಕಲ್ಲೆಸೆದು ಎದುರು ಭಾಗದ ಗಾಜು ಪುಡಿ ಮಾಡಿದ ಕಾರಣ ಕೆಲಕಾಲ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಖಾಸಗಿ ಬಸ್ ಹಾಗೂ ಟೂರಿಸ್ಟ್ ವಾಹನಗಳ ಸಂಚಾರವೂ ಇರಲಿಲ್ಲ. ನಗರದಲ್ಲಿ ಕೆಲವೇ ಅಟೊಗಳ ಓಡಾಟ ಮಾತ್ರ ಕಂಡು ಬರುತ್ತಿತ್ತು. ಪುತ್ತೂರಿನ ವಿವೇಕಾನಂದ ಸಮೂಹ ವಿದ್ಯಾಸಂಸ್ಥೆಗಳು, ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳಿಗೆ ರಜೆ ಸಾರಲಾಗಿತ್ತು. ಉಳಿದ ವಿದ್ಯಾಸಂಸ್ಥೆಗಳಲ್ಲಿ ಬಂದ ಮನೆಗೆ ತೆರಳಲು ಇಚ್ಛಿಸಿದವರಿಗೆ ಅವಕಾಶ ಮಾಡಿಕೊಡಲಾಗಿತ್ತು.

ADVERTISEMENT

ಈಶ್ವರಮಂಗಲ ಪೇಟೆ ಸಂಪೂರ್ಣ ಬಂದ್: ಗ್ರಾಮೀಣ ಪ್ರದೇಶದ ಈಶ್ವರಮಂಗಲ ಪೇಟೆ ಸಂಪೂರ್ಣ ಬಂದ್ ಆಗಿತ್ತು. ಮೆಡಿಕಲ್, ಹಾಲು ಮಾರಾಟ ಅಂಗಡಿ, ರಾಷ್ಟ್ರೀಕೃತ ಬ್ಯಾಂಕ್ ಹೊರತುಪಡಿಸಿ ಉಳಿದೆ ಮಳಿಗೆಗಳು ಬಂದ್ ಆಗಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಪೇಟೆಯಲ್ಲಿ ಜನಸಂಚಾರ ವಿರಳವಾಗಿತ್ತು. ಮೇನಾಲದಲ್ಲಿಯೂ ಅಂಗಡಿಗಳು ಬಂದ್ ಆಗಿದ್ದವು.

ಬೆಟ್ಟಂಪಾಡಿ ಮತ್ತು ಪಾಣಾಜೆ ಪೇಟೆಯ ಬಹತೇಕ ಅಂಗಡಿಗಳು ಬಂದ್ ಆಗಿದ್ದವು. ರೆಂಜ, ಶ್ರೀರಾಮನಗರ, ರೆಂಜ ಸರ್ಕಲ್‌ನಲ್ಲಿರುವ ಅಂಗಡಿಗಳು ಮುಚ್ಚಿದ್ದವು. ರೆಂಜ ಮೇಲಿನ ಪೇಟೆಯಲ್ಲಿ ಹಿಂದೂ ಸಮುದಾಯದವರು ಅಂಗಡಿಗಳನ್ನು ಮುಚ್ಚಿದ್ದರು. ಕುಂಬ್ರ, ಸಂಪ್ಯ, ಮಾಡಾವು, ತಿಂಗಳಾಡಿ, ಕಾವು ಪೇಟೆಗಳಲ್ಲಿ ಹಿಂದೂ ಸಮುದಾಯದ ವರ್ತಕರು ಅಂಗಡಿ ಬಂದ್ ಮಾಡಿದ್ದರು.

ಇಂದು ಮಧ್ಯರಾತ್ರಿ ತನಕ ನಿಷೇಧಾಜ್ಞೆ

ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿಗೊಳಿಸುವಂತೆ ಡಿವೈಎಸ್ಪಿ ಡಾ.ಗಾನ ಕುಮಾರ್ ಕೋರಿದ್ದು ಪುತ್ತೂರು ಉಪವಭಾಗಾರಿ ಗಿರೀಶ್ ನಂದನ್ ಗುರುವಾರ ಮಧ್ಯರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.