ಮಂಗಳೂರು: ‘ಆನಂದ..ಪರಮಾನಂದ ಗೀತೆಯನ್ನು ಮೋಹಕವಾಗಿ ಹಾಡಿದ ಪ್ರವೀಣ್ ಎನ್.ಎಸ್ ಅವರು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ‘ಸ್ವರ ಕುಡ್ಲ’ ಗಾಯನ ಸ್ಪರ್ಧೆಯ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪುರಭವನದಲ್ಲಿ ಬುಧವಾರ ನಡೆದ ಫೈನಲ್ ಹಂತದ ಸ್ಪರ್ಧೆಯಲ್ಲಿ ಪ್ರವೀಣ್ ಭಾವಗಾಯನದ ಮೂಲಕ ಶ್ರೋತೃಗಳನ್ನು ರಂಜಿಸಿದರು, ತೀರ್ಪುಗಾರರ ಮನಗೆದ್ದರು. ಟ್ರೋಫಿಯ ಜೊತೆ ಅವರು ₹ 7,777 ಮೊತ್ತವನ್ನು ಗಳಿಸಿದರು.
13 ಮಂದಿ ಭಾಗವಹಿಸಿದ್ದ ಫೈನಲ್‌ನಲ್ಲಿ ‘ಜಬ್ ದೀಪ್ ಜಲೇ ಆನಾ..’ ಹಾಡಿದ ಅಚಿಂತ್ಯ ರೈ ದ್ವಿತೀಯ ಸ್ಥಾನ ಗಳಿಸಿದರು. ಅವರಿಗೆ ₹ 5,555 ಮತ್ತು ಟ್ರೋಫಿ ಲಭಿಸಿತು. ಮೂರನೇ ಸ್ಥಾನ ಗಳಿಸಿದ ಪ್ರದಯ್ ಕೆ.ಶೆಣೈ ₹ 3,333 ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು. ಅವರು ಹಿಂದಿ ಗೀತೆ ‘ರಿಮ್ ಜಿಮ್ ಗಿರೆ ಸಾವನ್...’ ಹಾಡಿದರು.
ಮುಖ್ಯ ಅತಿಥಿಯಾಗಿದ್ದ ವಿರಾಜಪೇಟೆಯ ಪೊಲೀಸ್ ಅಧಿಕಾರಿ ಎಸ್ ಮಹೇಶ್ ಕುಮಾರ್ ಮಾತನಾಡಿ ಕಲಾವಿದರಲ್ಲಿ ಸಾತ್ವಿಕ ಗುಣ ಇರುತ್ತದೆ. ಆದ್ದರಿಂದ ಕಲೆಯಲ್ಲಿ ತೊಡಗಿಸಿಕೊಂಡವರು ಸಮಾಜಘಾತುಕ ಕೆಲಸ ಮಾಡುವುದಿಲ್ಲ. ಇದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಮೇಶ್ ಸಾಲ್ಯಾನ್ ಒಕ್ಕೂಟದಲ್ಲಿ 350ಕ್ಕೂ ಹೆಚ್ಚು ಕಲಾವಿದರಿದ್ದಾರೆ. ಅಶಕ್ತ ಕಲಾವಿದರಿಗೆ ಸಹಾಯ ಮಾಡುವುದು, ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಮಾಡುವುದು, ಯುವ ಕಲಾವಿದರನ್ನು ಪ್ರೋತ್ಸಾಹಿಸುವುದು, ಅನಾಥಾಶ್ರಮ ಮತ್ತು ವಿಶೇಷ ಮಕ್ಕಳ ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಒಕ್ಕೂಟದ ಪ್ರಮುಖ ಚಟುವಟಿಕೆ ಎಂದರು.
ಉದ್ಯಮಿಗಳಾದ ಶಶಿಧರ ಶೆಟ್ಟಿ, ಗಿರೀಶ್ ಆಳ್ವಾ, ಪತ್ರಕರ್ತ ವಾಲ್ಟರ್ ನಂದಳಿಕೆ, ಭಗವತಿ ಸಹಕಾರ ಬ್ಯಾಂಕ್ ಅಧ್ಯಕ್ಷ ಮಾಧವ ಬಿ.ಎಂ, ಚಿತ್ರ ನಿರ್ದೇಶಕ ಸಂತೋಷ್ ಮಾಡ, ಕಲಾವಿದ ಜಗದೀಶ್ ಶೆಟ್ಟಿ ಬೋಳೂರು, ನಟ ಪುಷ್ಪರಾಜ್, ಸುಭಾಷಿತ್, ಧನುರಾಜ್, ಹರಿಣಿ ಮತ್ತಿತರರು ಪಾಲ್ಗೊಂಡಿದ್ದರು. ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.