ಉಜಿರೆ: ವನ್ಯಜೀವಿಗಳ ಸಂರಕ್ಷಣೆ ಹಾಗೂ ಎಲ್ಲರ ಆರೋಗ್ಯ ರಕ್ಷಣೆಗಾಗಿ ಅರಣ್ಯ ಇಲಾಖೆಯು ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರೊಂದಿಗೆ ವನ್ಯಜೀವಿಗಳ ಸಂರಕ್ಷಣೆಯನ್ನೂ ಮಾಡುತ್ತಿದೆ. ಮುಂದಿನ ಜನಾಂಗದ ಸುಖ-ಶಾಂತಿ, ನೆಮ್ಮದಿಯ ಜೀವನಕ್ಕಾಗಿ ಗಿಡ-ಮರಗಳನ್ನು ಉಳಿಸಿ, ಬೆಳೆಸಿ ವನ್ಯಜೀವಿಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಅರಣ್ಯ ಇಲಾಖೆಯ ಮಂಗಳೂರು ಉಪವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ (ಎಸಿಎಫ್) ಕ್ಲಿಫರ್ಡ್ ಲೋಬೊ ಹೇಳಿದರು.
ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕದ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿಕ್ಲಬ್ ಮತ್ತು ಉಜಿರೆಯ ಬದುಕು ಕಟ್ಟೋಣ ತಂಡದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಒಂದು ಸಾವಿರ ಗಿಡಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಅರಣ್ಯ ನೀತಿಯಂತೆ ಶೇ 33 ಅರಣ್ಯ ಪ್ರದೇಶ ಇರಬೇಕು. ಆದರೆ, ಭಾರತದಲ್ಲಿ ಪ್ರಸ್ತುತ ಶೇ 24 ಹಾಗೂ ಕರ್ನಾಟಕದಲ್ಲಿ ಶೇ 21.7ರಷ್ಟು ಅರಣ್ಯ ಪ್ರದೇಶವಿದೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯನಾಶ ಸಲ್ಲದು. ಅರಣ್ಯ ರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕಾರ್ಯ ದೇಶ ರಕ್ಷಣೆ ಮಾಡುವ ಸೈನಿಕರ ಕರ್ತವ್ಯದಷ್ಟೇ ಪವಿತ್ರವಾಗಿದೆ ಎಂದು ಅವರು ಹೇಳಿದರು.
ಹೊಸ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರ ಶಿಸ್ತು, ಸೇವಾ ಕಳಕಳಿ ಮತ್ತು ಕರ್ತವ್ಯನಿಷ್ಠೆಯಿಂದ ಅವರ ಬಗ್ಗೆ ಹೆಚ್ಚು ಗೌರವ, ಪ್ರೀತಿ-ವಿಶ್ವಾಸ ಮತ್ತು ಭರವಸೆ ಮೂಡಿದೆ ಎಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ಚಂದ್ರ ಮಾತನಾಡಿ, ನಮ್ಮ ಮೂಲಭೂತ ಅವಶ್ಯಕತೆ ಮತ್ತು ಸೌಲಭ್ಯಗಳ ಪೂರೈಕೆಯೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಸಂರಕ್ಷಣೆ ಅನಿವಾರ್ಯವಾಗಿದೆ ಎಂದರು.
ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪ್ರೊ.ಪಿ.ಪ್ರಕಾಶ್ ಪ್ರಭು ಪರಿಸರ ಸಂರಕ್ಷಣೆಯ ಮಹತ್ವ ವಿವರಿಸಿದರು.
ಬದುಕುಕಟ್ಟೋಣ ತಂಡದ ಸಂಚಾಲಕ ಮೋಹನ ಕುಮಾರ್ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
ಉಪ ವಲಯ ಅರಣ್ಯಾಧಿಕಾರಿ ಕಿರಣ್ ಪಾಟೀಲ್ ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾಯೋಜನಾಧಿಕಾರಿ ಪ್ರೊ. ಮಹೇಶ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ಮಾಲಿನಿ ಅಂಚನ್ ವಂದಿಸಿದರು. ಸನುಷಾ ಪಿಂಟೊ, ಮಾನ್ಯ ಕೆ.ಆರ್. ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.