ADVERTISEMENT

ಪೊಲೀಸ್‌ ದರ್ಪಕ್ಕೆ ಅಮಾಯಕರ ಬಲಿ :ಇಲ್ಯಾಸ್ ಮಹಮದ್‌ ತುಂಬೆ

ಗೋಲಿಬಾರ್‌ ಖಂಡಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 19:45 IST
Last Updated 24 ಡಿಸೆಂಬರ್ 2019, 19:45 IST

ಮಂಗಳೂರು: ‘ಪೊಲೀಸ್ ದರ್ಪಕ್ಕೆ ಎರಡು ಮಂದಿ ಅಮಾಯಕರು ಜೀವ ಕಳೆದುಕೊಂಡಿದ್ದು, ಘಟನೆಗೆ ಕಾರಣ ಆಗಿರುವ ಪೊಲೀಸ್ ಕಮಿಷನರ್ ಡಾ. ಪಿ.ಎಸ್‌. ಹರ್ಷ, ಡಿಸಿಪಿ ಅರುಣಾಂಗ್ಷುಗಿರಿ ಹಾಗೂ ಇನ್‌ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರನ್ನು ಕೂಡಲೇ ಸರ್ಕಾರ ವಜಾ ಮಾಡಬೇಕು. ಈ ಘಟನೆಯಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಡೆಯುತ್ತದೆ. ಘಟನೆ ಖಂಡಿಸಿ ಶೀಘ್ರವೇ ಹೋರಾಟ ನಡೆಸಲಾಗುತ್ತದೆ ಎಂದು ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಇಲ್ಯಾಸ್ ಮಹಮದ್‌ ತುಂಬೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದರು.

ಮಂಗಳೂರು ಗೋಲಿಬಾರ್‌ಗೆ ಪೊಲೀಸ್ ಕಮಿಷನರ್‌ ಡಾ. ಹರ್ಷ ಅವರು ನೇರ ಕಾರಣವಾಗಿದ್ದಾರೆ. ಅವರ ಸೂಚನೆ ಮೇರೆಗೆ ಇತರ ಪೊಲೀಸ್ ಅಧಿಕಾರಿಗಳು ಪ್ರತಿಭಟನಾನಿರತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇಂತಹ ಅಧಿಕಾರಿಗಳನ್ನು ಅಮಾನತು ಮಾಡಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಡಿ.19 ರಂದು ಪ್ರತಿಭಟನೆಗೆ ಎಸ್‌ಡಿಪಿಐ ಕರೆ ನೀಡಿರಲಿಲ್ಲ. ಮುಸ್ಲಿಂ ಸಂಘಟನೆಯೊಂದು ಪೊಲೀಸ್ ಅನುಮತಿ ಪಡೆದು ಪ್ರತಿಭಟನೆ ನಡೆಸಲು ಮುಂದಾಗಿತ್ತು. ಆದರೆ, ಸಂಜೆ ವೇಳೆಗೆ ಸೆ.18 ರಂದು 144 ಕಲಂ ಜಾರಿ ಮಾಡಿ, ಅವರಿಗೆ ನೀಡಿದ ಅನುಮತಿ ವಾಪಸ್ ಪಡೆಯಲಾಯಿತು. ಈ ವೇಳೆ ಎಸ್‌ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ ಮತ್ತು ಶಾಹುಲ್ ಎಸ್.ಎಚ್. ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಜನರ ಜಮಾವಣೆಗೆ ಕರೆ ನೀಡಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊ ಸಂದೇಶ ಆಧರಿಸಿ ಪೊಲೀಸ್ ಇಲಾಖೆ ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದೆ. ಪ್ರಕರಣ ದಾಖಲಿಸಿ ನಮ್ಮನ್ನು ಬಾಯಿ ಮುಚ್ಚಿಸುವುದಕ್ಕೆ ಸಾಧ್ಯವಿಲ್ಲ. ಮಂಗಳೂರು ಗೋಲಿಬಾರ್ ಮತ್ತು ದೇಶದ್ರೋಹಿ ಪ್ರಕರಣ ದಾಖಲಿಸಿರುವುದರ ವಿರುದ್ಧವೂ ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ADVERTISEMENT

ಪೊಲೀಸರ ಅನಾಗರಿಕ ವರ್ತನೆ: ‘ಪೊಲೀಸ್‌ ಕಮಿಷನರ್‌ ಡಾ. ಹರ್ಷ ಅವರಿಗೆ ಸೌಜನ್ಯ, ಮಾನವೀಯತೆ ಇಲ್ಲ. ಗೌರವ ಕೊಡಲು ಗೊತ್ತಿಲ್ಲ. ಮಾಜಿ ಸಚಿವ, ಶಾಸಕ ಯುಟಿ ಖಾದರ್ ಜೊತೆಗೆ ‌ಅವರು ಅನುಚಿತವಾಗಿ ವರ್ತಿಸಿದ್ದಾರೆ. ಅವರಿಂದ ಪ್ರೇರಿತರಾದ ಪೊಲೀಸ್‌ ಸಿಬ್ಬಂದಿ‌ ಕೂಡ ಅನಾಗರಿಕರಂತೆ ವರ್ತಿಸಿದ್ದಾರೆ. ಪೊಲೀಸರು ಸಂಯಮದಿಂದ ವರ್ತಿಸಿದ್ದರೆ ಇಬ್ಬರ ಜೀವ ಉಳಿಯುತ್ತಿತ್ತು. ಲಾಠಿಚಾರ್ಜ್, ಅಶ್ರುವಾಯು, ಗೋಲಿಬಾರ್‌ ಮಾಡುವ ಅಗತ್ಯವೇ ಇರಲಿಲ್ಲ. ಆದರೆ, ಪೊಲೀಸರು ಉದ್ದೇಶ ಪೂರ್ವಕವಾಗಿ ಈ ಘಟನೆಗೆ ಮುಂದಾಗಿದ್ದರು’ ಎಂದು ಆರೋಪಿಸಿದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ., ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ, ಅಶ್ರಫ್‌ ಮಂಚಿ, ಕೋಶಾಧಿಕಾರಿ ನೂರುಲ್ಲಾ ಕುಳಾಯಿ, ಕಾರ್ಪೊರೇಟರ್ ಮುನೀಬ್ ಬೆಂಗರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.