ADVERTISEMENT

ಕರಾವಳಿಯಲ್ಲಿ ಪ್ರೀತಿಯ ದೀಪ ಹಚ್ಚೋಣ: ಪ್ರೊ.ಬಿ.ಎ.ವಿವೇಕ ರೈ

ಮಂಗಳೂರು ವಿವಿಯಲ್ಲಿ ಪ್ರೊ.ವಿವೇಕ ರೈಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:20 IST
Last Updated 3 ಜೂನ್ 2025, 14:20 IST
ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸನ್ಮಾನಿಸಲಾಯಿತು
ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸನ್ಮಾನಿಸಲಾಯಿತು   

ಉಳ್ಳಾಲ: ನಾವು ಕರಾವಳಿಯಲ್ಲಿ ದ್ವೇಷ ಬಿತ್ತುವುದು ಬೇಡ. ಬೆಂಕಿ ಹಚ್ಚುವುದೂ ಬೇಡ. ಮನುಷ್ಯ ಪ್ರೀತಿಯ ದೀಪ ಹಚ್ಚೋಣ. ಬಹುತ್ವದ ಈ ಮಣ್ಣಿನಲ್ಲಿ ನಾಡಿಗೆ ಹೊಸ ಸಂವೇದನೆ ದಾಟಿಸಬಲ್ಲ ಶಕ್ತಿ ಇದೆ. ಪರಸ್ಪರ ಗೌರವ ಪ್ರೀತಿಗೆ ಬದ್ಧವಾದ ಸಮಾಜವನ್ನು ಕಟ್ಟೋಣ ಎಂದು ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿದ್ದ ಅವರಿಗೆ ಪಂಪ ಪ್ರಶಸ್ತಿ ಲಭಿಸಿದ ಅಂಗವಾಗಿ ಮಂಗಳೂರು ವಿವಿಯಲ್ಲಿ ಮಂಗಳವಾರ ನಡೆದ ಅಭಿವಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳನ್ನು ಕಟ್ಟಡ, ಹಣದಿಂದ ಕಟ್ಟಲು ಸಾಧ್ಯವಿಲ್ಲ. ಶೈಕ್ಷಣಿಕ ಕಾಳಜಿ, ಜ್ಞಾನದ ಬಗೆಗಿನ ಹಸಿವು ಮತ್ತು ಮಾನವೀಯ ಸಂಬಂಧಗಳ ಸಂಘಟಿತ ಪ್ರಯತ್ನದ ಮೂಲಕ ಕಟ್ಟಬೇಕು. ಕುವೆಂಪು ಮತ್ತು ಕಾರಂತರ ಬರವಣಿಗೆ ಮತ್ತು ಬದುಕು ನನಗೆ ಆದರ್ಶ. ಪಂಪ ನನ್ನ ಇಷ್ಟದ ಕವಿ. ಪಂಪನ ಕುರಿತಾಗಿಯೇ ಮುಂದಿನ ನನ್ನ ಕೃತಿ ಬರಲಿದೆ. ಸಾಹಿತ್ಯದ ಓದು ನನಗೆ ಬದುಕಿನ ಪ್ರಾಮಾಣಿಕತೆಯನ್ನು ಕಲಿಸಿದೆ. ಕುಲಪತಿಯಾದ ಬಳಿಕ ಮೂಡಾದಿಂದ ಸೈಟಿನ ಕೊಡುಗೆ ಬಂದಿತ್ತು. ನಾನು ಅದನ್ನು ನಿರಾಕರಿಸಿದೆ ಎಂದರು.

ಎಲ್ಲಾ ರೀತಿಯ ಅಭಿಪ್ರಾಯಗಳಿಗೂ ವಿಶ್ವವಿದ್ಯಾಲಯದ ಎಲ್ಲ ಕಿಟಕಿ ಬಾಗಿಲುಗಳು ತೆರದಿರಬೇಕು. ವಿಚಾರ ವಿಮರ್ಶೆ ಅಧ್ಯಯನಗಳಿಗೆ ವಿವಿ ವೇದಿಕೆಯಾಗಬೇಕು, ಜೊತೆಗೆ ಅನುಭವ ಮಂಟಪವಾಗಬೇಕು ಎಂದರು.

ADVERTISEMENT

ಅಭಿನಂದನಾ ಭಾಷಣ ಮಾಡಿದ ಜಾನಪದ ವಿದ್ವಾಂಸ ಪ್ರೊ.ಕೆ.ಚಿನ್ನಪ್ಪಗೌಡ, ನಿಮ್ಮ ಮುಡಿಗೆ ಹೂವನ್ನಲ್ಲದೆ ಹುಲ್ಲ ತರೆನು  ಇದು ಪ್ರೊ.ವಿವೇಕ್ ರೈಗಳ ಬದುಕಿನ ಯಶಸ್ಸಿನ ಗುಟ್ಟು. ಜೀವನದುದ್ದಕ್ಕೂ ಶಿಸ್ತು, ಕಾಯಕನಿಷ್ಟೆಯೊಂದಿಗೆ ಬೆಳೆದವರು. ಅವರ ಎಲ್ಲಾ ವಿಮರ್ಶೆಗಳಲ್ಲೂ ಖಂಡನೆ ಇಲ್ಲ ಮಂಡನೆ ಇದೆ ಎಂದರು.

ಕನ್ನಡ‌ ಕೆಲಸಗಳ ತೀವ್ರತೆ ಈಗ ಕಡಿಮೆಯಾಗಿದ್ದು, ಕನ್ನಡ ಮುರಿಯುವ ಕೆಲಸದ ಬದಲು ಕನ್ನಡವನ್ನು ‌ಕಟ್ಟುವ ಕೆಲಸ ನಮ್ಮಿಂದ ಆಗಬೇಕಿದೆ. ಎಲ್ಲ ಕನ್ನಡದ ಮನಸ್ಸುಗಳು ಒಟ್ಟಾಗಿ‌ ಕೆಲಸ ಮಾಡಿದರೆ ಮಾತ್ರ ಕನ್ನಡ ಬೆಳೆಯಬಹುದು ಎಂಬ ನಿಷ್ಠೆಯೊಂದಿಗೆ ವಿವೇಕ್ ರೈ ಅವರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡ ವಿದ್ವಾಂಸರಾಗಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ದ.ಕ.ಜಿಲ್ಲೆಯ ಸಾಹಿತ್ಯ, ಸಂಸ್ಕೃತಿಯ ಅಪಾರ ಜ್ಞಾನದೊಂದಿಗೆ ಮನಸ್ಸುಗಳನ್ನು ಜೋಡಿಸುವ ಕಾರ್ಯ ಮಾಡಿರುವ ಪ್ರೊ.ವಿವೇಕ್ ರೈ ಅವರು ಮಂಗಳೂರು ಕ್ಯಾಂಪಸ್‌ನಲ್ಲಿ ಹೊಸ ರೀತಿಯ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟಿದ್ದರು. ವಿವೇಕ್ ರೈ ಕಟ್ಟಿಕೊಟ್ಟಿರುವ ಪರಂಪರೆಯನ್ನು ಮುನ್ನಡೆಸಲಿದ್ದೇವೆ ಎಂದರು.

ಅಭಿವಂದನಾ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ‌ ಶಿವರಾಮ ಶೆಟ್ಟಿ, ಅಭಯ್ ಕುಮಾರ್, ಪ್ರಾಧ್ಯಾಪಕರಾದ ನಾಗಪ್ಪ ಗೌಡ, ಶಾನಿ ಕೆ.ಆರ್., ಪ್ರೊ.ವಿವೇಕ್ ರೈ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ‌ ಪ್ರೊ.ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ಪ್ರಾಧ್ಯಾಪಕ ಧನಂಜಯ ಕುಂಬ್ಳೆ ವಂದಿಸಿದರು. ಉಪನ್ಯಾಸಕ ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.