ADVERTISEMENT

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 18ರಂದು ಪುತ್ತೂರಿನಲ್ಲಿ ರೈತರ ಪ್ರತಿಭಟನೆ

ರಾಜ್ಯ ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 10:47 IST
Last Updated 14 ಡಿಸೆಂಬರ್ 2018, 10:47 IST
ರಾಜ್ಯ ರೈತ ಸಂಘ-ಹಸಿರುಸೇನೆಯ ರಾಜ್ಯ ಸಮಿತಿ ಕಾರ್ಯದರ್ಶಿ ಸಿ.ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಶುಕ್ರವಾರ ಮಾಹಿತಿ ನೀಡಿದರು.
ರಾಜ್ಯ ರೈತ ಸಂಘ-ಹಸಿರುಸೇನೆಯ ರಾಜ್ಯ ಸಮಿತಿ ಕಾರ್ಯದರ್ಶಿ ಸಿ.ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಶುಕ್ರವಾರ ಮಾಹಿತಿ ನೀಡಿದರು.   

ಪುತ್ತೂರು : `ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಇದೇ 18ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಮಿನಿವಿಧಾನಸೌಧ ಬಳಿ ರೈತರ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ' ಎಂದು ಸಂಘಟನೆಯ ರಾಜ್ಯ ಸಮಿತಿ ಕಾರ್ಯದರ್ಶಿ ಸಿ.ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, `ಅಂದು ಬೆಳಿಗ್ಗೆ ಪುತ್ತೂರಿನ ಬಸ್‌ಲ್ದಾಣದ ಬಳಿಯಿಂದ ಮಿನಿವಿಧಾನಸೌಧ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ಪ್ರತಿಭಟನಾ ಸಭೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ರೈತರ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಲಾಗುವುದು. ರಾಜ್ಯ ಸಮಿತಿಯ ಕಾರ್ಯಧ್ಯಕ್ಷ ಎಚ್.ಆರ್.ಬಸವರಾಜ, ಸಂಚಾಲಕ ರಾಜು ಹಿಟ್ಲೂರು ಭಾಗವಹಿಸುವರು ಎಂದರು.

‘ಯಾವುದೇ ಷರತ್ತುಗಳಿಲ್ಲದೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು, ಅಡಿಕೆ ಕೊಳೆರೋಗಕ್ಕೆ ತಕ್ಷಣ ಪರಿಹಾರ ನೀಡಬೇಕು. ಕೃಷಿ ಕ್ಷೇತ್ರವು ಹವಾಮಾನ ವೈಪರಿತ್ಯ, ಬೆಲೆ ಕುಸಿತ, ಬೆಳೆ ನಾಶಗಳಿಂದಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಅಡಿಕೆ ಬೆಳೆಯು ಕೊಳೆರೋಗಕ್ಕೆ ತುತ್ತಾಗಿದ್ದು, ಶೇಕಡ 40ರಷ್ಟು ಬೆಳೆ ನಾಶವಾಗಿದೆ. ಸರ್ಕಾರ ಪರಿಹಾರ ನೀಡುವುದು, ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವಲ್ಲಿ ವಿಳಂಬ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಬೇಡಿಕೆಗಳು: ` ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ, ಸರ್ಕಾರವೇ ನಡೆಸಲು ಕ್ರಮಕೈಗೊಳ್ಳಬೇಕು. ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಕುಮ್ಕಿ ಹಕ್ಕು ಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು. ಮರಳುಗಣಿಗಾರಿಕೆ ನೀತಿಯನ್ನು ಗಣಿ ಇಲಾಖೆಯಿಂದ ಬೇರ್ಪಡಿಸಬೇಕು’ ಎಂದು ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದರು.

ರಾಜ್ಯ ರೈತ ಸಂಘ-ಹಸಿರುಸೇನೆಯ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಶ್ರೀಧರ್ ಶೆಟ್ಟಿ ಬೈಲುಗುತ್ತು, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಹೊನ್ನಪ್ಪ ಗೌಡ ಸವಣೂರು, ಬೆಳ್ತಂಗಡಿ ತಾಲ್ಲೂಕು ಸಮಿತಿಯ ಅಧ್ಯಕ್ಷ ಕೇಶವ ಪೂಜಾರಿ, ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ಹರಿಣಿ.ವಿ.ರೈ ಆರ್ಯಾಪು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.