ADVERTISEMENT

ಪುತ್ತೂರು: ಬೀದಿ ಬದಿ ವ್ಯಾಪಾರಿಗಳ ಅಂಗಡಿ ತೆರವಿಗೆ ಕಾಂಗ್ರೆಸ್‌ ವಿರೋಧ

ಬೀದಿ ಬದಿ ವ್ಯಾಪಾರಿಗಳ ಅಂಗಡಿ ತೆರವಿಗೆ ಕಾಂಗ್ರೆಸ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 14:34 IST
Last Updated 26 ಜುಲೈ 2021, 14:34 IST
ಪುತ್ತೂರು ನಗರದ ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಮತ್ತು ಸಂತ್ರಸ್ತ ವ್ಯಾಪಾರಸ್ಥರಿಗೆ ಮರು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪುತ್ತೂರು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪುತ್ತೂರು ನಗರದ ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಮತ್ತು ಸಂತ್ರಸ್ತ ವ್ಯಾಪಾರಸ್ಥರಿಗೆ ಮರು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪುತ್ತೂರು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಯಿತು.   

ಪುತ್ತೂರು: ನಗರಸಭೆಯ ವತಿಯಿಂದ ಶುಕ್ರವಾರ ಕಾರ್ಯಾಚರಣೆ ನಡೆಸಿ ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಮತ್ತು ಸಂತ್ರಸ್ತ ವ್ಯಾಪಾರಸ್ಥರಿಗೆ ಮರು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪುತ್ತೂರು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ‘ಕೋವಿಡ್ ಸೋಂಕಿನ ಪರಿಣಾಮವಾಗಿ ಕಂಗಾಲಾಗಿರುವ ಬಡ ಕುಟುಂಬಗಳು ಇದೀಗ ಜೀವನೋಪಾಯಕ್ಕಾಗಿ ಬೀದಿಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿವೆ. ಬಿಜೆಪಿ ನೇತೃತ್ವದಲ್ಲಿರುವ ನಗರಸಭೆಯು ಅವರ ಅಂಗಡಿಗಳನ್ನು ಯಾವುದೇ ಪೂರ್ವಸೂಚನೆ ನೀಡದೆ ಏಕಾಏಕಿ ತೆರವುಗೊಳಿಸಿ ದೌರ್ಜನ್ಯ ಎಸಗಿದೆ. ಬಿಜೆಪಿಗರಿಗೆ ಬಡವರ ಹಸಿವಿನ ಬೆಲೆ ಗೊತ್ತಿಲ್ಲ. ನಗರಸಭೆಯಲ್ಲಿ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿ ಯಾವಾಗಲೂ ಶ್ರೀಮಂತರ ಪರವಾಗಿರುವ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇವರಿಗೆ ಬಡವರ ಕಣ್ಣೀರು ತಟ್ಟಲಿದೆ. ತೆರವುಗೊಳಿಸಲಾಗಿರುವ ಅಂಗಡಿಗಳನ್ನು ಮತ್ತೆ ನಿರ್ಮಿಸಿ ಕೊಡಬೇಕು ಹಾಗೂ ಮುಂದೆ ಇಂತಹ ತೆರವು ಕಾರ್ಯಾಚರಣೆ ಮುಂದುವರಿಸಬಾರದು. ಸಂತ್ರಸ್ತ ವ್ಯಾಪಾರಿಗಳಿಗೆ ಪರಿಹಾರ ಒದಗಿಸುವ ಕೆಲಸ ನಡೆಯಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಪುತ್ತೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಮಾತನಾಡಿ, ‘ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿ ರಕ್ಷಣೆಗೆಂದೇ ಮನಮೋಹನ ಸಿಂಗ್ ಸರ್ಕಾರ ಕಾಯ್ದೆ ತಂದಿತ್ತು. ಈಗಿನ ಸರ್ಕಾರ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಬ್ಯಾಂಕ್ ಸಾಲ ನೀಡುತ್ತಿದೆ. ಬೀದಿಬದಿ ವ್ಯಾಪಾರಿಗಳಿಗೆ ಇನ್ನಷ್ಟು ಸಾಲ ನೀಡಲಾಗುವುದು ಎಂದು ಭರವಸೆ ನೀಡಿದ ನಾಲ್ಕೇ ದಿನಗಳಲ್ಲಿ ಇಲ್ಲಿ ಅಂಗಡಿಗಳನ್ನು ಕೆಡವಿ ಧ್ವಂಸ ಮಾಡುವ ಕೆಲಸವಾಗಿದೆ. ಈ ಅಮಾನುಷ ಕಾರ್ಯದ ವಿರುದ್ಧ ಕೇಂದ್ರ ಕೌಶಲಾಭಿವೃದ್ಧಿ ಇಲಾಖೆಗೆ ದೂರು ನೀಡಲಾಗುವುದು’ ಎಂದರು.

ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮೋಹನ ಗೌಡ ಕಲ್ಮಂಜ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು ಮಾತನಾಡಿ ನಗರಸಭೆಯ ಕಾರ್ಯಾಚರಣೆಯನ್ನು ಖಂಡಿಸಿದರು.

ಬೀದಿಬದಿ ವ್ಯಾಪಾರಿಗಳಾದ ಲವಿಟಾ, ಈಶ್ವರ್, ಕೃಷ್ಣಪ್ಪ ಗೌಡ, ಕೇಶವ, ಚೆನ್ನಪ್ಪ, ಅಬೀಬ್, ಅಬ್ದುಲ್ ರಹಿಮಾನ್ ಲಕ್ಷ್ಮಣ್, ಮಹಮ್ಮದ್ ಹಸನ್ ಅಳಲು ತೋಡಿಕೊಂಡರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್ ಭಂಡಾರಿ, ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಪಕ್ಷದ ಮುಖಂಡರಾದ ಕುಂಬ್ರ ದುರ್ಗಾಪ್ರಸಾದ್ ರೈ, ಎ.ಕೆ.ಜಯರಾಮ್ ರೈ, ಶೈಲಾ ಪೈ, ವಿಶಾಲಾಕ್ಷಿ ಬನ್ನೂರು, ಶಕೂರ್ ಹಾಜಿ, ವಿಶ್ವಜಿತ್ ಅಮ್ಮುಂಜ, ಬಾಲಕೃಷ್ಣ ಗೌಡ, ಮಹಾಬಲ ರೈ ವಳತ್ತಡ್ಕ, ರಿಯಾಜ್, ಶಿವರಾಮ ಆಳ್ವ, ಯೂಸುಫ್ ಹಾಜಿ ದರ್ಬೆ, ಸಿರಿಲ್ ರೋಡ್ರಿಗಸ್, ಸೂಫಿ ಬಪ್ಪಳಿಗೆ, ಸನಮ್ ನಝೀರ್, ಯೂಸುಫ್ ದರ್ಬೆ, ಶರೂನ್ ಸಿಕ್ವೆರಾ, ಕೇಶವ ಪಡೀಲ್, ಯಾಕೂಬ್ ಮಲಾರ್, ಮೌರಿಸ್ ಮಸ್ಕರೇನಸ್, ಸಿದ್ದಿಕ್ ಸುಲ್ತಾನ್, ಪ್ರಜ್ವಲ್ ರೈ ತೊಟ್ಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.