ಬಜಪೆ: ಉಡುಪಿ ಜಿಲ್ಲೆಯ ಪಡುಬಿದ್ರಿಯ ನಂದಿಕೂರಿನಿಂದ ದ.ಕ ಜಿಲ್ಲೆ ಮೂಲಕ ಕಾಸರಗೋಡಿಗೆ ಹಾದು ಹೋಗುವ 440 ಕೆ.ವಿ ವಿದ್ಯುತ್ ಮಾರ್ಗವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಮಿಜಾರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಸಮೃದ್ಧವಾದ ಕೃಷಿ ಭೂಮಿಯಲ್ಲಿ ಈ ಯೋಜನೆ ಅನುಷ್ಠಾನವಾಗುತ್ತಿದೆ. ರೈತರ ಭೂಮಿಗೆ ಅಕ್ರಮವಾಗಿ ಪ್ರವೇಶಿಸಿ, ವಿದ್ಯುತ್ ಮಾರ್ಗದ ಕಾಮಗಾರಿ ನಡೆಸಲಾಗುತ್ತಿದೆ. ಪರ್ಯಾಯ ಮಾರ್ಗದಲ್ಲಿ ಈ ಯೋಜನೆ ಜಾರಿಯಾಗಲಿ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಗೌರವಧ್ಯಕ್ಷ ಧನಕೀರ್ತಿ ಬಲಿಪ ಮಾತನಾಡಿ, ಇದು ರೈತರಿಗೆ ಮಾಡುವ ದೊಡ್ಡ ಅನ್ಯಾಯ ಎಂದರು.
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಮಿಥುನ್ ರೈ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಅಮೀನ್, ಪೃಥ್ವಿರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ, ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಗಿರೀಶ್ ಆಳ್ವ, ಬಂಟ್ವಾಳ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸುಬ್ರಮಣ್ಯ ಭಟ್, ಗಣೇಶ್ ಪೂಜಾರಿ, ಹರಿಯಪ್ಪ ಮುತ್ತೂರು, ಸತೀಶ್ ಪೂಜಾರಿ ಬಳ್ಳಾಜೆ ಮಾತನಾಡಿದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ಬದಲಾಗಿ ಮಂಗಳೂರು ತಹಶೀಲ್ದಾರ್ ಸ್ಥಳಕ್ಕೆ ಬಂದಾಗ ರೈತರು ಮತ್ತು ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ಬಳಿಕ ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಸ್ಥಳಕ್ಕೆ ಬಂದು, ಮೊಬೈಲ್ ಕರೆ ಮೂಲಕ ಜಿಲ್ಲಾಧಿಕಾರಿ ಜತೆ ರೈತ ಮುಖಂಡರನ್ನು ಮಾತನಾಡಿಸಿದರು. ಶಾಸಕರ ನೇತೃತ್ವದಲ್ಲಿ ರೈತರು ಮತ್ತು ಸಂತ್ರಸ್ತರ ಸಭೆ ನಡೆಸುವ ಬಗ್ಗೆ ರೈತ ಮುಖಂಡರಿಗೆ ಭರವಸೆ ನೀಡಿದರು.
ಬಳಿಕ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಗುರುಪುರ ಹೋಬಳಿ ಉಪತಹಶೀಲ್ದಾರ್ ಶಿವಪ್ರಸಾದ್, ಬಜಪೆ ಸಿಪಿಐ ಸಂದೀಪ್, ಬಡಗ ಎಡಪದವು ಗ್ರಾಮಾಧಿಕಾರಿ ಪವಿತ್ರಾ ಸ್ಥಳದಲ್ಲಿದ್ದರು.
ಮುಖಂಡರಾದ ಮನೋಹರ್ ಶೆಟ್ಟಿ ನಡಿಕಂಬ್ಳ, ಸುಬ್ರಹ್ಮಣ್ಯ ಭಟ್ ಬಂಟ್ವಾಳ, ಮುರುವ ಮಹಾಬಲ ಭಟ್ ಲಕ್ಷ್ಮಣ್ ಮಂಜೇಶ್ವರ, ಚಿತ್ತರಂಜನ್ ಭಾಗವಹಿಸಿದ್ದರು. ಹಸಿರು ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಲವೂರು ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.