ADVERTISEMENT

ಪಿಯು ಫಲಿತಾಂಶ: ಮೂಡುಬಿದಿರೆ ಆಳ್ವಾಸ್‌ನ ಇಬ್ಬರು ವಿದ್ಯಾರ್ಥಿಗಳಿಗೆ 2ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 12:37 IST
Last Updated 18 ಜೂನ್ 2022, 12:37 IST

ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ವಿಜ್ಞಾನ ವಿಭಾಗದಲ್ಲಿ ಶ್ರೀಕೃಷ್ಣ ಪೆಜತ್ತಾಯ 600ರಲ್ಲಿ 597 ಅಂಕ, ವಾಣಿಜ್ಯ ವಿಭಾಗದಲ್ಲಿ ಸಮರ್ಥ್‌ ವಿಶ್ವನಾಥ ಜೋಷಿ 600ರಲ್ಲಿ 595 ಅಂಕ ಪಡೆದು 2ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದರು.

ಶ್ರೀಕೃಷ್ಣ ಪೆಜತ್ತಾಯಗೆ ವೈದ್ಯನಾಗುವ ಆಸೆ: ಫಿಜಿಯೋಥರಪಿಯಲ್ಲಿ ವೈದ್ಯಕೀಯ ಶಿಕ್ಷಣ ಮಾಡಿ ವೈದ್ಯನಾಗಬೇಕೆಂಬ ಹಂಬಲ ಇದೆ ಎಂದು ಶ್ರೀಕೃಷ್ಣ ಪೆಜತ್ತಾಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತರಗತಿಯ ಪಾಠವನ್ನು ಹಾಸ್ಟೆಲ್‌ನಲ್ಲಿ ಕುಳಿತು ಅದೇ ದಿನ ರಿವಿಜನ್ ಮಾಡುತ್ತಿದ್ದೆ. ನನ್ನ ಸಹಪಾಠಿಗಳ ಜತೆ ಗುಂಪು ಚರ್ಚೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಅಂತಿಮ ಪರೀಕ್ಷೆಗೆ ಮೊದಲು ಕಾಲೇಜಿನಲ್ಲಿ ಎರಡು ಸಿದ್ಧತಾ ಪರೀಕ್ಷೆಗಳು ನಡೆಸಿರುವುದು ತುಂಬಾ ಅನುಕೂಲವಾಗಿದೆ. ಕಾಲೇಜಿನ ಗುಣಮಟ್ಟದ ಶಿಕ್ಷಣ ನನ್ನ ಸಾಧನೆಗೆ ಪ್ರೇರಣೆಯಾಯಿತು ಎಂದರು. ಈತ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ದತ್ತು ಸ್ವೀಕಾರ ಯೋಜನೆಯ ವಿದ್ಯಾರ್ಥಿ. ಇವರ ತಂದೆ ಸತೀಶ್ ಕುಮಾರ್ ಕೆಟರಿಂಗ್ ಉದ್ಯೋಗ ಮಾಡುತ್ತಿದ್ದರೆ, ತಾಯಿ ಶ್ರೀವಿದ್ಯಾ ಗೃಹಿಣಿ. ಇವರು ಬೆಂಗಳೂರಿನ ನಾಗದೇವನಹಳ್ಳಿಯವರು.

ಸಿ.ಎ. ಆಗುವ ಬಯಕೆ: ತರಗತಿಯಲ್ಲಿ ಉಪನ್ಯಾಸಕರು ಬೋಧಿಸುತ್ತಿದ್ದ ವಿಷಯವನ್ನು ಹಾಸ್ಟೆಲ್‌ನಲ್ಲಿ ಬೆಳಿಗ್ಗೆ ಮತ್ತು ಸಂಜೆ ನಿರಂತರ ಅಭ್ಯಾಸ ಮಾಡುತ್ತಿದ್ದೆ. ಟ್ಯೂಶನ್‌ಗೆ ಹೋಗಿಲ್ಲ. ಕಾಲೇಜಿನಲ್ಲಿ ಒಳ್ಳೆಯ ಶೈಕ್ಷಣಿಕ ವಾತಾವರಣ ಇದೆ. ಮುಂದೆ ಸಿ.ಎ ಆಗಬೇಕೆಂಬ ಬಯಕೆ ಇದ್ದು, ಮಾಮೂಲಿ ಓದಿನ ಜತೆಗೆ ಸಿ.ಎ ಅಭ್ಯಾಸ ಮಾಡುತ್ತಿದ್ದೇನೆ ಎಂದರು.

ಹೈಸ್ಕೂಲ್ ವರೆಗೆ ಕನ್ನಡ ಮಾಧ್ಯಮದಲ್ಲೆ ಓದಿದ್ದು ಪಿಯುಸಿಗೆ ಬರುವಾಗ ಪ್ರಾರಂಭದಲ್ಲಿ ಆಂಗ್ಲ ಮಾಧ್ಯಮದ ಸಮಸ್ಯೆಯಾದರೂ ನಂತರ ಸುಧಾರಿಸಿಕೊಂಡೆ ಎಂದು ಸಮರ್ಥ್‌ ವಿಶ್ವನಾಥ ಜೋಷಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ಈತ ಶಿರಸಿಯ ಕೃಷಿಕ ವಿಶ್ವನಾಥ ಜೋಷಿ ಮತ್ತು ಜಯ ದಂಪತಿ ಮಗ. ಆಳ್ವಾಸ್‌ ಶಿಕ್ಷಣ ಸಂಸ್ಥೆಯ ದತ್ತು ಸ್ವೀಕಾರ ಯೋಜನೆಯ ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.