ADVERTISEMENT

ಪುತ್ತೂರು: 29, 30ರಂದು ಶ್ರೀನಿವಾಸ ಕಲ್ಯಾಣೋತ್ಸವ

ಸಾಮೂಹಿಕ ವಿವಾಹ-ಹಿಂದವಿ ಸಾಮ್ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:08 IST
Last Updated 25 ನವೆಂಬರ್ 2025, 4:08 IST

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ವತಿಯಿಂದ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನ.29, 30ರಂದು ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವವೂ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಹಿಂದೂ ಸಮಾಜಕ್ಕೆ ಶಕ್ತಿ ಕೊಡುವ ಮತ್ತು ಸನಾತನ ಹಿಂದೂ ಧರ್ಮ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಮಾಜದ ಮುಂದಿರುವ ನೂರಾರು ಸವಾಲುಗಳಿಗೆ ಒಂದಾಗಿ ಸಂದೇಶ ಕೊಡುವ ಕಾರ್ಯಕ್ರಮ ಇದಾಗಲಿದೆ ಎಂದರು.

ಸಾಮೂಹಿಕ ವಿವಾಹದ ಕುರಿತು ಘೋಷಣೆ ಮಾಡಿದ ಆರಂಭದಲ್ಲಿ 143 ಜೋಡಿಗಳು ನೋಂದಾಯಿಸಿಕೊಂಡಿದ್ದರು. ಆದರೆ, ಬೇರೆ ಬೇರೆ ಕಾರಣಗಳಿಂದ ಸಾಧ್ಯವಾಗಿಲ್ಲ. ಈಗ 16 ಜೋಡಿಗಳ ನೋಂದಣಿ ಪೂರ್ಣಗೊಂಡಿದ್ದು, ವಧೂವರರಿಗೆ ಸಾಹಿತ್ಯ ವಿತರಿಸಲಾಗಿದೆ. ಒಂದು ಜೋಡಿಯ ಪರಿಕರಗಳಿಗೆ ಸುಮಾರು ₹ 75 ಸಾವಿರ ವೆಚ್ಚವಾಗುತ್ತದೆ. ಇದರಲ್ಲಿ ಚಿನ್ನದ ತಾಳಿ, ಕರಿಮಣಿ, ವಸ್ತ್ರಗಳ ವೆಚ್ಚವೂ ಇದೆ. ಶಾಸ್ತ್ರಬದ್ಧವಾಗಿ ವಿವಾಹದ ಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ADVERTISEMENT

ಸಾಮೂಹಿಕ ವಿವಾಹ ನಡೆಯುವ ನ.30ರಂದು ದಿಬ್ಬಣವು ಬೆಳಿಗ್ಗೆ 8.30ಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಬಳಿಯಿಂದ ಹೊರಡಲಿದೆ. ವಿವಾಹ ಕಾರ್ಯಕ್ರಮದಲ್ಲೂ ಪ್ರತಿ ಜೋಡಿಗೆ ಒಬ್ಬೊಬ್ಬ ವೈದಿಕರಿರುತ್ತಾರೆ. ಪ್ರಧಾನ ವೈದಿಕರ ಮಾರ್ಗದರ್ಶನದಂತೆ ಆಯಾ ವೈದಿಕರು ವಿವಾಹ ಕಾರ್ಯಕ್ರಮ ನೆರವೇರಿಸುವರು ಎಂದರು.

ನ.28ಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ದರ್ಬೆಯಿಂದ ಸಂಜೆ 4ಕ್ಕೆ ಮೆರವಣಿಗೆ ಹೊರಡಲಿದೆ. ಪ್ರತಿ ಗ್ರಾಮದಿಂದ ಬಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಮಹಾಲಿಂಗೇಶ್ವರ ದೇವಳದ ಸಭಾಭವನದ ವರೆಗೆ ಸಾಗಿ ಉಗ್ರಾಣದಲ್ಲಿ ಜೋಡಿಸಲಾಗುವುದು. ನ.29ಕ್ಕೆ ಬೆಳಿಗ್ಗೆ ಗಣಪತಿ ಹೋಮ, ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 4ರಿಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರ ಶೋಭಾಯಾತ್ರೆ ಬೊಳುವಾರಿನಿಂದ ಆರಂಭಗೊಳ್ಳುವುದು. ಸಂಜೆ 7.30ರಿಂದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಹಿಂದವಿ ಸಾಮ್ರಾಜ್ಯೋತ್ಸವ ನಡೆಯಲಿದೆ ಎಂದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗೋಕರ್ಣ ಮಂಡಲಾಧೀಶ್ವರ ರಾಘವೇಶ್ವರ ಭಾರರಿ ಮಹಾಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಅರಮಾದೇನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕನ್ಯಾಡಿ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ, ಕೇಮಾರು ಕ್ಷೇತ್ರದ ಈಶವಿಠಲದಾಸ ಸ್ವಾಮೀಜಿ, ಕನ್ಯಾನ ಕಣಿಯೂರು ಮಠದ ಮಹಾಬಲ ಸ್ವಾಮೀಜಿ, ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ರಾತ್ರಿ ಮಂಗಳರಾತಿ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಲಾವೈಭವ ನಡೆಯಲಿದೆ ಎಂದರು.

ನ.30 ರಂದು ಬೆಳಿಗ್ಗೆ 5.30ರಿಂದ ಸುಪ್ರಭಾತ ಪೂಜಾ ಸೇವೆ, 10.30ರ ಮಕರ ಲಗ್ನದಲ್ಲಿ ಸಾಮೂಹಿಕ ವಿವಾಹ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನೋತ್ಸವ ನಡೆಯಲಿದೆ. ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಆಕರ್ಷಕ ಸಿಡಿಮದ್ದು ಪ್ರದರ್ಶನ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಇದು ಹಿಂದೂ ಸಮಾಜದ ಕಾರ್ಯಕ್ರಮ. ಹಾಗಾಗಿ ರಾಷ್ಟ್ರೀಯ ಸ್ವಯಂಸೇವಕ ಮತ್ತು ಸಂಘ ಪರಿವಾರದ ಎಲ್ಲರಿಗೂ ಆಮಂತ್ರಣ ನೀಡಲಾಗಿದೆ. ಸಂಘದ ಜವಾಬ್ದಾರಿಯುತ ಸ್ಥಾನದಲ್ಲಿದ್ದವರಿಗೆಲ್ಲರಿಗೂ ನಮ್ಮ ಕಾರ್ಯಕರ್ತರು ಆಮಂತ್ರಣ ನೀಡಿದ್ದಾರೆ. ಅವರೆಲ್ಲರೂ ಭಾಗವಹಿಸುವ ವಿಶ್ವಾಸ ನಮಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನರಸಿಂಹ ಪ್ರಸಾದ್ ಮಾತನಾಡಿ, ಇದೊಂದು ರಾಜಕೀಯ ರಹಿತವಾಗಿ ನಡೆಯುವ ಕಾರ್ಯಕ್ರಮ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೇಮ್‌ರಾಜ್‌, ಸಹಸಂಚಾಲಕರಾದ ಉಮೇಶ್ ಕೋಡಿಬೈಲ್, ರವಿ ಕುಮಾರ್ ರೈ ಕೆದಂಬಾಡಿಮಠ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.