ADVERTISEMENT

ಪುತ್ತೂರು ದೇವಳದ ಜಾತ್ರೋತ್ಸವ ಆರಂಭ

ಬೆಳಿಗ್ಗೆಯಿಂದಲೇ ದೇವಳಕ್ಕೆ ಸುವಸ್ತುಗಳನ್ನು ತಂದೊಪ್ಪಿಸಿದ ಭಕ್ತರು; ಸಂಜೆ ಪೇಟೆ ಸವಾರಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 6:11 IST
Last Updated 11 ಏಪ್ರಿಲ್ 2024, 6:11 IST
ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವದ ಧ್ವಜಾವರೋಹಣ ಬುಧವಾರ ನಡೆಯಿತು
ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವದ ಧ್ವಜಾವರೋಹಣ ಬುಧವಾರ ನಡೆಯಿತು   

ಪುತ್ತೂರು: ಪುತ್ತೂರು ಸೀಮೆಯ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬುಧವಾರ ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರೋತ್ಸವ ಆರಂಭಗೊಂಡಿತು.

ವೃಷಭ ಲಗ್ನ ಸುಮುಹೂರ್ತದಲ್ಲಿ ಸಾವಿರಾರು ಮಂದಿ ಭಕ್ತರ ಘೋಷದೊಂದಿಗೆ ಧ್ವಜಾರೋಹಣಕ್ಕೆ ಕುಂಟಾರು ರವೀಶ ತಂತ್ರಿ  ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಅನಂತರ ದೇವರ ಬಲಿ ಉತ್ಸವದ ಬಳಿಕ ಧ್ವಜಸ್ಥಂಭಕ್ಕೆ ಪೂಜೆ ಸಲ್ಲಿಸಲಾಯಿತು. ಪ್ರಧಾನ ಅರ್ಚಕರಾದ ವಿ.ಎಸ್. ಭಟ್ ಮತ್ತು ವಸಂತ ಕೆದಿಲಾಯ ವೈದಿಕ ಕಾರ್ಯಕ್ರಮ ನೆರವೇರಿಸಿದರು.

ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್. ಕೆ. ಜಗನ್ನಿವಾಸ ರಾವ್, ವಾಸ್ತು ಎಂಜಿನಿಯರ್ ಪಿ. ಜಿ. ಜಗನ್ನಿವಾಸ್ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ಮ್ಯಾನೇಜರ್ ಹರೀಶ್ ಶೆಟ್ಟಿ ಪಾಲ್ಗೊಂಡಿದ್ದರು.

ADVERTISEMENT

ಜಾತ್ರೆಯ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಅಡಿಕೆ, ಸೀಯಾಳ, ಬಾಳೆಗೊನೆ, ಕಬ್ಬಿನ ಜಲ್ಲೆ, ಮಾವಿನ ಕಾಯಿಯ ಗೊಂಚಲು, ಹಲಸಿನ ಕಾಯಿ, ಹಿಂಗಾರ ಮೊದಲಾದ ಸುವಸ್ತುಗಳನ್ನು ಬುಧವಾರ ಬೆಳಿಗ್ಗೆಯಿಂದಲೇ ದೇವಳಕ್ಕೆ ತಂದೊಪ್ಪಿಸಿದರು. ಧ್ವಜಾರೋಹಣದ ಬಳಿಕ ಈ ವಸ್ತುಗಳನ್ನು ಧ್ವಜಸ್ಥಂಭದ ಕಟ್ಟೆಗೆ ಸುತ್ತಲೂ ಕಟ್ಟಲಾಯಿತು. ಮಧ್ಯಾಹ್ನ ಕುರಿಯ ಮಾಡಾವು ಏಳ್ನಾಡುಗುತ್ತು ಕುಟುಂಬಸ್ಥರಿಂದ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಅಂಕುರಾರ್ಪಣೆಯ ಬಳಿಕ ದೇವರ ಬಲಿ ಉತ್ಸವ ನಡೆಯಿತು. ಬಳಿಕ ಬೊಳುವಾರು, ಶ್ರೀರಾಮ ಪೇಟೆ, ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ಕಡೆಗೆ ದೇವರ ಪೇಟೆ ಸವಾರಿ ಆರಂಭಗೊಂಡಿತು. ಧ್ವಜಾರೋಹಣದ ಬಳಿಕ ದೇವಳದ ಎದುರು ಭಾಗದ ಕಟ್ಟೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಭಗವಧ್ವಜಾರೋಹಣ ನೆರವೇರಿಸಿದರು.

ದೇವಳದ ಎದುರು ಭಾಗದ ಕಟ್ಟೆಯಲ್ಲಿ ಭಗವಧ್ವಜಾರೋಹಣ ಸಾವಿರಾರು ಮಂದಿ ಭಕ್ತರ ಘೋಷದೊಂದಿಗೆ ಧ್ವಜಾರೋಹಣ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.