ADVERTISEMENT

ಪುತ್ತೂರು | ಲೀಲಾವತಿ ಅಧ್ಯಕ್ಷೆ, ಬಾಲಚಂದ್ರ ಉಪಾಧ್ಯಕ್ಷ

ಪುತ್ತೂರು ನಗರಸಭೆ: ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 14:51 IST
Last Updated 3 ಸೆಪ್ಟೆಂಬರ್ 2024, 14:51 IST
ಲೀಲಾವತಿ ಅಣ್ಣು ನಾಯ್ಕ
ಲೀಲಾವತಿ ಅಣ್ಣು ನಾಯ್ಕ   

ಪುತ್ತೂರು: ಇಲ್ಲಿನ ಪುತ್ತೂರು ನಗರಸಭೆಯ 2ನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿಯ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷರಾಗಿ ಬಿಜೆಪಿಯ ಬಾಲಚಂದ್ರ ಕರಿಯಾಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರಸಭೆಯ 31 ಸ್ಥಾನಗಳ ಪೈಕಿ 25 ಸದಸ್ಯ ಬಲ ಹೊಂದಿರುವ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಇಬ್ಬರು ಅಭ್ಯರ್ಥಿಗಳಿದ್ದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯವರ್ಗಕ್ಕೆ ಮೀಸಲಾಗಿತ್ತು. ಈ ಸಂಬಂಧ ಬಿಜೆಪಿ ಪೂರ್ವಬಾವಿ ಸಭೆ ನಡೆಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿತ್ತು. 5 ಮಂದಿ ಕಾಂಗ್ರೆಸ್ ಮತ್ತು ಎಸ್‌ಡಿಪಿಐನ ಒಬ್ಬ ಸದಸ್ಯ ನಾಮಪತ್ರ ಸಲ್ಲಿಸಿರಲಿಲ್ಲ.

ಅಧ್ಯಕ್ಷ ಸ್ಥಾನ ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾಗಿದ್ದ ಕಾರಣ ಪುತ್ತೂರು ವಾರ್ಡ್‌ 13ರ ಸದಸ್ಯೆ ಶಶಿಕಲಾ ಸಿ.ಎಸ್., ಚಿಕ್ಕಮುಡ್ನೂರು ವಾರ್ಡ್‌ 1ರ ಸದಸ್ಯೆ ಲೀಲಾವತಿ ಅವರಿಗೆ ಮಾತ್ರ ಅವಕಾಶವಿತ್ತು.

ADVERTISEMENT

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಪಿ.ಜಿ.ಜಗನ್ನಿವಾಸ ರಾವ್, ಬಾಲಚಂದ್ರ ಮತ್ತು ಸುಂದರ ಪೂಜಾರಿ ಅವರ ಹೆಸರು ಕೇಳಿ ಬಂದಿತ್ತು. ಪಕ್ಷದ ಸೂಚನೆಯಂತೆ ಬಾಲಚಂದ್ರ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಸುಂದರ ಪೂಜಾರಿ ಬಡಾವು ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಲೀಲಾವತಿ ಅವರು ಪ್ರಥಮ ಬಾರಿಗೆ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮೂರನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಬಾಲಚಂದ್ರ ಅವರು ಕಳೆದ ಅವಧಿಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.

ಮಾಜಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ, ತಹಶೀಲ್ದಾರ್ ಪುರಂದರ ಹೆಗ್ಡೆ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಬಿಜೆಪಿ ಚುನಾವಣಾ ವೀಕ್ಷಕ ಜಗದೀಶ್ ಶೇಣವ, ಅಪ್ಪಯ್ಯ ಮಣಿಯಾಣಿ, ಗೋಪಾಲಕೃಷ್ಣ ಹೇರಳೆ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಸನ್ನಕುಮಾರ್ ಮಾರ್ತ, ರಾಜೇಶ್ ಬನ್ನೂರು, ಚಂದ್ರಶೇಖರ ಬಪ್ಪಳಿಗೆ, ಸಾಜ ರಾಧಾಕೃಷ್ಣ ಆಳ್ವ, ಕಿಶೋರ್ ಕುಮಾರ್ ಬೊಟ್ಯಾಡಿ, ಯುವರಾಜ್ ಪೆರಿಯತ್ತೋಡಿ, ಭಾಮಿ ಅಶೋಕ್ ಶೆಣೈ, ವಿದ್ಯಾಗೌರಿ, ಗೌರಿ ಬನ್ನೂರು, ಜೀವಂಧರ್ ಜೈನ್, ಸುರೇಶ್ ಆಳ್ವ ಭಾಗವಹಿಸಿದ್ದರು.

ಅಶೋಕ್‌ ಕುಮಾರ್‌ ರೈ ಅವರು ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಪುತ್ತೂರಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡೋಣ ಎಂದರು.

ಬಾಲಚಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.