ADVERTISEMENT

ಪುತ್ತೂರು |ಸಿಎಂ ಪಾಲ್ಗೊಂಡಿದ್ದ ‘ಜನಮನ’ದಲ್ಲಿ ನೂಕುನುಗ್ಗಲು: 11 ಮಂದಿ ಅಸ್ವಸ್ಥ

ಪುತ್ತೂರಿನಲ್ಲಿ ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮ; ನೀರು ಒಯ್ಯಲು ಪೊಲೀಸರಿಂದ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 18:21 IST
Last Updated 20 ಅಕ್ಟೋಬರ್ 2025, 18:21 IST
ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು
ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು   

ಪುತ್ತೂರು (ದಕ್ಷಿಣ ಕನ್ನಡ): ಶಾಸಕರ ದೀಪಾವಳಿ ಉಡುಗೊರೆ ಮತ್ತು ಮುಖ್ಯಮಂತ್ರಿಗಾಗಿ ತಾಸುಗಟ್ಟಲೆ ಕಾದಿದ್ದ ಜನರಿಗೆ ಕುಡಿಯಲು ನೀರು ಕೊಡಲೂ ಪೊಲೀಸರು ಅವಕಾಶ ನೀಡದೇ ನಿರ್ಜಲೀಕರಣದಿಂದ ಹಲವು ಮಂದಿ ಸೋಮವಾರ ಇಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ನಿತ್ರಾಣರಾದರು. 

ಬಟ್ಟೆ ಮತ್ತು ತಟ್ಟೆ ಪಡೆಯಲು ನೂಕುನುಗ್ಗಲು ಉಂಟಾಗಿ ಅಸ್ವಸ್ಥಗೊಂಡ 11 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು 13 ವರ್ಷದಿಂದ ದೀಪಾವಳಿ ವೇಳೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ಒಂದು ಲಕ್ಷ ಜನರಿಗೆ ಉಡುಗೊರೆ ನೀಡಲು ನಿರ್ಧರಿಸಲಾಗಿತ್ತು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಸಭಾ ಕಾರ್ಯಕ್ರಮ ಮಧ್ಯಾಹ್ನ 12ಕ್ಕೆ ನಿಗದಿಯಾಗಿತ್ತು. ಇದಕ್ಕೂ ಮುನ್ನ ಫಲಾನುಭವಿಗಳ ನೋಂದಣಿ ಮತ್ತು ರಸಮಂಜರಿ ಇತ್ತು. ಜನರು ಬೆಳಿಗ್ಗೆಯಿಂದಲೇ ಬರತೊಡಗಿದ್ದರು. 

ರೈ ಎಸ್ಟೇಟ್ ಆ್ಯಂಡ್‌ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ವಿಶಾಲ ಮೈದಾನದಲ್ಲಿ ಬೃಹತ್ ಚಪ್ಪರ ಹಾಕಲಾಗಿತ್ತು. ಆದರೆ, ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಕೆಸರು ತುಂಬಿತ್ತು. ಅದರಲ್ಲೇ ಮೇಲೆ ಕುರ್ಚಿಗಳಲ್ಲಿ ಕಷ್ಟಪಟ್ಟು ಕುಳಿತವರಿಗೆ ನೀರಿನ ಬಾಟಲಿ ತೆಗೆದುಕೊಂಡು ಹೋಗಲು ಪೊಲೀಸರು ಅವಕಾಶ ನೀಡಲಿಲ್ಲ.

‘ಮುಖ್ಯಮಂತ್ರಿ ಕಡೆಗೆ ಯಾರೂ ಬಾಟಲಿ ಎಸೆಯಬಾರದು ಎಂಬ ಮುನ್ನೆಚ್ಚರಿಕೆಯ ಸಲುವಾಗಿ ಬಾಟಲಿ ತೆಗೆದುಕೊಂಡು ಹೋಗಲು ಅನುವು ಮಾಡಲಿಲ್ಲ’ ಎಂದು ಭದ್ರತೆಗಾಗಿ ಬಂದಿದ್ದ ಸಬ್‌ ಇನ್‌ಸ್ಪೆಕ್ಟರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಮುಂದೆ ಕುಳಿತ ಸನ್ಮಾನಿತರು ಮತ್ತು ಪ್ರಮುಖರಿಗೆ ಸಂಘಟಕರು ಕದ್ದುಮುಚ್ಚಿ ನೀರು ತಂದುಕೊಡುತ್ತಿದ್ದರು.   

ಮುಖ್ಯಮಂತ್ರಿಕಾಗಿ ಕಾದರು...

ಮುಖ್ಯಮಂತ್ರಿ ವೇದಿಕೆಗೆ ಬರುವಾಗ ಮಧ್ಯಾಹ್ನ 1 ಗಂಟೆಯಾಗಿತ್ತು. ಕೇವಲ 15 ನಿಮಿಷಗಳಲ್ಲಿ ಸಭಾ ಕಾರ್ಯಕ್ರಮ ಮುಗಿಸುವುದಾಗಿ ಘೋಷಿಸಿದರೂ ಕಾರ್ಯಕ್ರಮ ಮುಗಿಯುವಾಗ 3 ಗಂಟೆ ಕಳೆದಿತ್ತು. ಸಿದ್ದರಾಮಯ್ಯ ಅವರ ಭಾಷಣದ ನಂತರ ಊಟದ ಹಾಲ್‌ ಬಳಿ ಹಾಗೂ ಉಡುಗೊರೆ ನೀಡುವಲ್ಲಿ ಜನಸಂದಣಿಯಾಯಿತು. ನಂತರ ನೂಕು ನುಗ್ಗಲು ಉಂಟಾಯಿತು. ಕೆಲವರು ಅಲ್ಲೇ ಸುಸ್ತಾಗಿ ಬಿದ್ದರು. 

ವಸಂತಿ ಬಲ್ನಾಡು (53), ಶಬಾ ಮಾಡಾವು (20), ಅಮೀನಾ ಪಾಟ್ರಕೋಡಿ (56), ಯೋಗಿತಾ (20), ನೇತ್ರಾವತಿ ಇರ್ದೆ (37), ಲೀಲಾವತಿ ಕಡಬ (50), ಕುಸುಮಾ (62), ರತ್ನಾವತಿ ಪೆರಿಗೇರಿ (67), ಸ್ನೇಹಪ್ರಭಾ (41), ಜಸೀಲಾ (30), ಅಫೀಲಾ ಪಾಟ್ರಕೋಡಿ (30), ಅವರನ್ನು ಪುತ್ತೂರಿನ ಜನಲರ್ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ತೆರಳಿ ಚಿಕಿತ್ಸೆ ಪಡೆದಿದ್ದಾರೆ. 

ಮುಖ್ಯಮಂತ್ರಿ ಭಾಷಣದ ಬಳಿಕವಷ್ಟೇ ಊಟ ಮತ್ತು ಉಡುಗೊರೆ ವಿತರಣೆ ಆರಂಭಿಸಿದ್ದರಿಂದ ಸಮಸ್ಯೆಯಾಯಿತು. ಜನರು ಅಪಾರ ಸಂಖ್ಯೆಯಲ್ಲಿ ಒಮ್ಮೆಲೇ ಮುನ್ನುಗ್ಗಿದ ಕಾರಣ ನೂಕು ನುಗ್ಗಲು ಉಂಟಾಯಿತು. ಅನೇಕರು ಊಟ ಮತ್ತು ಉಡುಗೊರೆ ಪಡೆಯದೆ ಹಿಂತಿರುಗಿದರು. ಕೆಲವರು ಮೈದಾನದ ಹೊರಗೆ ದಾರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದರು. 

ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು

‘ಆಹಾರ ಮತ್ತು ಗಿಫ್ಟ್ ವಿಳಂಬವಾಗಿ ನೀಡಿದ ಕಾರಣ ಹಲವರಿಗೆ ಹೈಪೊಗ್ಲೇಸಮಿಯಾ ಅಥವಾ ನಿರ್ಜಲೀಕರಣ ಉಂಟಾಯಿತು. ಮೂವರು ಮಹಿಳೆಯರಿಗೆ ಐ.ವಿ ಫ್ಲೂಯಿಡ್ಸ್ ನೀಡಲಾಗಿದ್ದು 7 ಮಹಿಳೆಯರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು
ಬೌನ್ಸರ್‌ಗಳ ನಿರ್ಬಂಧ
ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಭಾರಿ ಪೊಲೀಸ್ ಬಂದೋಬಸ್ತ್‌ ಇದ್ದರೂ ಮುಂಭಾಗದ ‘ಗೌಂಡ್‌ ಜೀರೊ’ ವಲಯದ ಹಿಂದಿನ ಒಂದಷ್ಟು ಭಾಗದ ನಿಯಂತ್ರಣವನ್ನು ಬೌನ್ಸರ್‌ಗಳ ಕೈಗೆ ವಹಿಸಲಾಗಿತ್ತು. ಮಂಗಳೂರಿನ ಏಜೆನ್ಸಿಯೊಂದರಿಂದ ಬಂದಿದ್ದ ಬೌನ್ಸರ್‌ಗಳು ತಮಗೆ ಮೀಸಲಿರಿಸಿದ್ದ ಜಾಗದ ಕಡೆಗೆ ಪ್ರಮುಖರು ಹೋಗುವಾಗ ಮನಬಂದಂತೆ ತಳ್ಳಿದರು. ಮಹಿಳೆಯರು ಸೇರಿದಂತೆ ಹಲವು ಪತ್ರಕರ್ತರನ್ನೂ ಅವರು ತಡೆದರು. ತಮಗೆ ಮೀಸಲಿರಿಸಿರುವ ಜಾಗಕ್ಕೆ ಹೋಗುವುದಾಗಿ ಹೇಳಿದರೂ ತಳ್ಳಿದರು. ನಂತರ ಸಂಘಟಕರು ಬಂದು ಕರೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.