ADVERTISEMENT

ಪುತ್ತೂರು: ಕೊಳ್ತಿಗೆ ಗ್ರಾಮದಲ್ಲೇ ಬೀಡುಬಿಟ್ಟ ಕಾಡಾನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:39 IST
Last Updated 13 ಆಗಸ್ಟ್ 2025, 4:39 IST
ಪುತ್ತೂರು ತಾಲ್ಲೂಕಿನ ಕೊಳ್ತಿಗೆ ಗ್ರಾಮದ ಕೆಂಪುಗುಡ್ಡೆಯ ದಾಮೋದರ ಗೌಡ ಅವರ ತೋಟದಲ್ಲಿ ಹಾನಿಯಾದ ಬಾಳೆ 
ಪುತ್ತೂರು ತಾಲ್ಲೂಕಿನ ಕೊಳ್ತಿಗೆ ಗ್ರಾಮದ ಕೆಂಪುಗುಡ್ಡೆಯ ದಾಮೋದರ ಗೌಡ ಅವರ ತೋಟದಲ್ಲಿ ಹಾನಿಯಾದ ಬಾಳೆ    

ಪುತ್ತೂರು: ತಾಲ್ಲೂಕಿನ ಕೊಳ್ತಿಗೆ ಗ್ರಾಮ ವ್ಯಾಪ್ತಿಯಲ್ಲಿಯೇ ಕಳೆದ ಒಂದು ವಾರದಿಂದ ಕಾಡಾನೆಯೊಂದು ಬೀಡುಬಿಟ್ಟು ರಾತ್ರಿ ವೇಳೆ ಕೃಷಿ ಪ್ರದೇಶಗಳಿಗೆ ಲಗ್ಗೆಯಿಟ್ಟು ಫಸಲನ್ನು ಹಾನಿ ಮಾಡುತ್ತಿದ್ದು, ಸೋಮವಾರ ರಾತ್ರಿಯೂ ಉಪಟಳ ಮುಂದುವರಿಸಿದೆ.

ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಮೀಪದ ಕೆಂಪುಗುಡ್ಡೆ ನಿವಾಸಿಯಾದ ಕೃಷಿಕ ದಾಮೋದರ ಗೌಡ ಅವರ ತೋಟಕ್ಕೆ ಸೋಮವಾರ ಕಾಡಾನೆ ನುಗ್ಗಿ ತೋಟದಲ್ಲಿದ್ದ ಬಾಳೆಗಿಡಗಳನ್ನು ಸಂಪೂರ್ಣ ಹಾನಿ ಮಾಡಿದೆ.

ಕಳೆದ ವಾರ ಕೊಳ್ತಿಗೆ ಗ್ರಾಮದ ಪುರುಷರಕೋಡಿ, ಕಟ್ಟಪುಣಿ, ಕುಂಟಿಕಾನ, ಚಾಲೆಪಡ್ಪು ಮೊದಲಾದ ಕಡೆಗಳಲ್ಲಿ ಫಸಲು ಹಾನಿ ಮಾಡಿದ್ದ ಕಾಡಾನೆ, ಭಾನುವಾರ (ಆ.10) ರಾತ್ರಿ ದೊಡ್ಡಮನೆ, ಕೊಡಂಬು, ಕೂರೇಳು ಪ್ರದೇಶಕ್ಕೆ ಕಾಲಿಟ್ಟು ಅಪಾರ ಪ್ರಮಾಣದ ಫಸಲನ್ನು ಹಾನಿ ಮಾಡಿತ್ತು. ಸೋಮವಾರ ಮತ್ತೆ ಕೆಂಪುಗುಡ್ಡೆ ಪ್ರದೇಶದಲ್ಲಿ ಹಾವಳಿ ಮುಂದುವರಿಸಿದೆ. ಕೊಳ್ತಿಗೆ ಭಾಗದಿಂದ ಕಾಡಾನೆ ಬೇರೆಡೆಗೆ ತೆರಳದೆ ಉಳಿದುಕೊಂಡಿರುವುದು ಇಲ್ಲಿನ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.

ADVERTISEMENT

ರಾತ್ರಿ ವೇಳೆ ಕೃಷಿ ಪ್ರದೇಶಗಳಿಗೆ ಇಳಿದು ಕೃಷಿ ಹಾನಿ ಮಾಡುತ್ತಿರುವ ಕಾಡಾನೆ, ಹಗಲು ವೇಳೆಗಾಗಲೇ ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಕಣಿಯಾರು ಮಲೆ ರಕ್ಷಿತಾರಣ್ಯ ಸೇರಿಕೊಳ್ಳುತ್ತಿದೆ. ಒಂದೆಡೆ ಗರ್ನಲ್, ಪಟಾಕಿ ಸಿಡಿಸಿ ಬೆನ್ನಟ್ಟುವ ಕೆಲಸ ಮಾಡಿದರೆ ದಾರಿ ಬದಲಾಯಿಸಿ ಮತ್ತೊಂದು ಕಡೆಗೆ ಹೋಗುತ್ತಿದೆ. ಹೀಗೆ ಹಾನಿ ಮುಂದುವರಿದರೆ ಕೃಷಿ ಉಳಿಸಿಕೊಳ್ಳುವುದಾದರೂ ಹೇಗೆ, ಇದಕ್ಕೆ ಪರಿಹಾರ ಇಲ್ಲವೇ ಎಂದು ಕೃಷಿಕರ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.