
ಪುತ್ತೂರು: ಕಾಂಗ್ರೆಸ್ ನೇತೃತ್ವದ ಸರ್ಕಾರದ ಯೋಜನೆಗಳು ಬಡವರ ಪರವಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಬದುಕು ಕಲ್ಪಿಸಿವೆ. ಸಂಕಷ್ಟದಲ್ಲಿರುವ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಾರ್ಮಿಕ ಇಲಾಖೆ ವತಿಯಿಂದ ಗಾರೆ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಿಸಿ ಮಾತನಾಡಿದರು.
ಕಾರ್ಮಿಕ ಇಲಾಖೆಯಿಂದ ಎಲ್ಲಾ ಕಾರ್ಮಿಕ ವರ್ಗಕ್ಕೂ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬಡ ಕಾರ್ಮಿಕ ವರ್ಗದ ರಕ್ಷಣೆಯೇ ಸರ್ಕಾರದ ಮೂಲ ಉದ್ದೇಶ. ಈ ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ಕಾರ್ಮಿಕರಿಗೆ ಸೌಲಭ್ಯ ನೀಡುತ್ತಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಡವರ್ಗದ ಜನ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದರು.
400 ಮಂದಿ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಿಸಲಾಯಿತು. ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಭಾರತ್ ಕಾರ್ಮಿಕ ಸಂಘದ ಅಧ್ಯಕ್ಷ ಅಶ್ರಫ್, ಬಿಎಂಎಸ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪುರಂದರ್ ರೈ, ನವ ಕರ್ನಾಟಕ ಕಾರ್ಮಿಕ ಸಂಘದ ಅಧ್ಯಕ್ಷ ರಾಜೇಶ್ ಭಾಗವಹಿಸಿದ್ದರು. ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಗಣಪತಿ ಹೆಗ್ಡೆ ಸ್ವಾಗತಿಸಿದರು. ಶಾಸಕರ ಕಚೇರಿ ಸಿಬ್ಬಂದಿ ರಚನಾ, ವಿನೋದ್ ಕೊಳ್ತಿಗೆ, ಪ್ರವೀಣ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.