
ಪುತ್ತೂರು: ಸಂಕಷ್ಟದ ಸಮಯದಲ್ಲಿ ನೋವಿಗೆ ಸ್ಪಂದಿಸುವ ಮನಸ್ಸುಗಳೇ ಸಮಾಜದ ಶಕ್ತಿ. ಈ ಮಾನವೀಯತೆಯೇ ನಿಜವಾದ ಧರ್ಮ. ಈ ನಿಟ್ಟಿನಲ್ಲಿ ಕಾವು ಘಟಕದ ಕಾರ್ಯ ಶ್ಲಾಘನೀಯ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ ಹೇಳಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಕಾವು ಘಟಕದ ವತಿಯಿಂದ ಮಾಡ್ನೂರು ಗ್ರಾಮದ ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಿಸಿ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪುತ್ತಿಲ ಪರಿವಾರದ ಕಾವು ಘಟಕ ಆರಂಭಿಸಿರುವ ಸಹಾಯಹಸ್ತ ಯೋಜನೆಯ ಮೂಲಕ ಸಂಗ್ರಹವಾದ ಹಣ ಹಾಗೂ ಟ್ರಸ್ಟ್‌ನಿಂದ ನಾಲ್ಕು ಕುಟುಂಬಗಳಿಗೆ ಸಹಾಯಧನ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ಕಾವು ಮಾಣಿಯಡ್ಕ ನಿವಾಸಿ ಶಾರದಾ, ಪಲಾಶತ್ತಡ್ಕ ನಿವಾಸಿ ಸತೀಶ್, ಪಳನೀರು ನಿವಾಸಿ ನವೀನ್ ಅವರಿಗೆ ತಲಾ ₹10 ಸಾವಿರ, ಕಾವು ಪೂವಂದೂರು ನಿವಾಸಿ ವಿಮಲ ಅವರಿಗೆ ಮನೆ ದುರಸ್ತಿಗಾಗಿ ₹ 10 ಸಾವಿರ ಮೊತ್ತದ ಚೆಕ್ ವಿತರಿಸಿದರು.
ಟ್ರಸ್ಟ್ ಮುಖಂಡ ರವಿಕುಮಾರ್ ರೈ ತಿಂಗಳಾಡಿ ಮಠ, ಸ್ಥಳೀಯ ಪ್ರಮುಖರಾದ ಅನಂತಕೃಷ್ಣ ನಾಯಕ್ ಮೇಲ್ಪಾದೆ, ಬಾಲಮುರಳಿ ಸಸ್ಪೇಟಿ, ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಕಾರ್ಯದರ್ಶಿಗಳಾದ ಯೋಗೀಶ್ ಕಾವು, ರವಿಪ್ರಸಾದ್ ಶೆಟ್ಟಿ ಕಾವು, ಪದಾಧಿಕಾರಿಗಳಾದ ಅಮೃತಲಿಂಗಂ ಕಾವು,ರಾಜೇಶ್ ಸೀಮುಂಜ, ಯೋಗೀಶ್ ಸರೋಳ್ತಡಿ, ನಿರಂಜನ್ ಕಾವು, ರವಿ ಪಾಟಾಳಿ ಕಾವು, ಪ್ರದೀಪ್ ಕೆರೆಮಾರು, ಕಮಲಾಕ್ಷ ಮಾಣಿಯಡ್ಕ ಹಾಜರಿದ್ದರು. ಚಿದಾನಂದ ಆಚಾರ್ಯ ಕಾವು ಕಾರ್ಯಕ್ರಮ ಸಂಯೋಜಿಸಿದ್ದರು.
ಕರಸೇವಕರಿಗೆ ಉಚಿತ ಅಯೋಧ್ಯೆ ದರ್ಶನ: ಈ ಹಿಂದೆ ಅಯೋಧ್ಯೆ ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮಾಡ್ನೂರು ಗ್ರಾಮದ ಎಲ್ಲಾ ಕರಸೇವಕರಿಗೂ ಅಯೋಧ್ಯೆಯ ಶ್ರೀರಾಮ ಮಂದಿರ ದರ್ಶನಕ್ಕಾಗಿ ಉಚಿತ ಪ್ರಯಾಣ ಭತ್ಯೆ ಭರಿಸಲಾಗುವುದು ಎಂದು ಅರುಣ್‌ಕುಮಾರ್ ಪುತ್ತಿಲ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.