ADVERTISEMENT

ಮುಂಬೈನಲ್ಲಿ ಮೃತಪಟ್ಟಿದ್ದ ವ್ಯಕ್ತಿ 'ಪುತ್ತೂರಿನ ಶಶಿ ಪೂಜಾರಿ' ಗುರುತು ಪತ್ತೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 3:33 IST
Last Updated 31 ಜುಲೈ 2021, 3:33 IST

ಪುತ್ತೂರು: ಮುಂಬೈಯಲ್ಲಿ ಮೃತಪಟ್ಟಿದ್ದ ‘ಪುತ್ತೂರಿನ ಶಶಿ ಪೂಜಾರಿ’ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಶಶಿಪೂಜಾರಿ ಯಾನೆ ಶಿವಪ್ಪ ಪೂಜಾರಿ (55) ಅವರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಸಮೀಪದ ಮೂಡಾಯೂರು ನಿವಾಸಿ ಎಂಬುದು ಗೊತ್ತಾಗಿದೆ. ಅವರ ಮೃತದೇಹ ತರಲು ಸಂಬಂಧಿಕರು ಮುಂಬೈಗೆ ತೆರಳಿದ್ದಾರೆ.

ಶಶಿಪೂಜಾರಿ 35 ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ಮುಂಬೈಗೆ ತೆರಳಿದವರು ಹಿಂತಿರುಗಿ ಊರಿಗೆ ಬಂದಿರಲಿಲ್ಲ. ಮನೆಯವರ ಸಂಪರ್ಕದಲ್ಲೂ ಇರಲಿಲ್ಲ. ಆರಂಭದಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ್ದ ಮನೆಯವರು ಬಳಿಕ ಸುಮ್ಮನಾಗಿದ್ದರು. ಅವಿವಾಹಿತರಾಗಿದ್ದ ಅವರು ತಾನು ಮುಂಬೈಯಲ್ಲಿ ಹೊಂದಿದ್ದ ಪಾನ್‌ಬೀಡ ಅಂಗಡಿಯ ಬಳಿಯ ವಾಸವಾಗಿದ್ದರು.

‘ಮಹಾರಾಷ್ಟ್ರದ ಬಾಂದ್ರಾ ಪೂರ್ವದ ಎವರ್ ಗ್ರೀನ್ ಹೋಟೆಲ್ ಬಳಿ ಪಾನ್ ಬೀಡ ಅಂಗಡಿ ಹೊಂದಿದ್ದ ಶಶಿಪೂಜಾರಿ ಈಚೆಗೆ ಮೃತಪಟ್ಟಿದ್ದಾರೆ. ಅವರು ತಾನು ಪುತ್ತೂರಿನವರು ಎಂದು ನಮ್ಮಲ್ಲಿ ಹೇಳಿ ಕೊಳ್ಳುತ್ತಿದ್ದರು. ನನ್ನ ಸಹೋದರ, ಸಹೋದರಿ ಪುತ್ತೂರಿನಲ್ಲಿ ಇದ್ದಾರೆ ಎಂದು ತಿಳಿಸಿದ್ದರು. ಇವರ ವಾರಿಸುದಾರರು ಯಾರಾದರೂ ಇದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ’ ಎಂದು ಕೆಲವು ದಿನಗಳಿಂದ ಮೃತರ ಭಾವಚಿತ್ರ ಹಾಗೂ ಮುಂಬೈಯಲ್ಲಿರುವ ಕೆಲವರ ಮೊಬೈಲ್ ಫೋನ್ ನಂಬರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಡುತ್ತಿತ್ತು. ಭಾವಚಿತ್ರದ ಆಧಾರದಲ್ಲಿ ಮನೆಯವರು ಗುರುತು ಪತ್ತೆ ಹಚ್ಚಿದ್ದಾರೆ.

ADVERTISEMENT

ಶಶಿಪೂಜಾರಿ ಸಹೋದರ ಬನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಮೂಡಾಯೂರು ತಿಮ್ಮಪ್ಪ ಪೂಜಾರಿ ಮತ್ತು ಆಪ್ತರು ಮುಂಬೈಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.