ADVERTISEMENT

ಪುತ್ತೂರು ದೇವರಮಾರು ಗದ್ದೆಯಲ್ಲಿ ಹಿಂದೂ ಭಕ್ತರ ವಾಹನ ಮಾತ್ರ ನಿಲುಗಡೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 12:47 IST
Last Updated 29 ಆಗಸ್ಟ್ 2021, 12:47 IST
ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರು ಇರುವ ವಿಶಾಲವಾದ ದೇವರಮಾರು ಗದ್ದೆ
ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರು ಇರುವ ವಿಶಾಲವಾದ ದೇವರಮಾರು ಗದ್ದೆ   

ಪುತ್ತೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರಿನ ವಿಶಾಲವಾದ ದೇವರಮಾರು ಗದ್ದೆಯಲ್ಲಿ ಇನ್ನು ಮುಂದೆ ಹಿಂದೂ ಭಕ್ತರ ವಾಹನ ನಿಲುಗಡೆಗೆ ಮಾತ್ರ ಅವಕಾಶ ಕಲ್ಪಿಸುವ ಹಾಗೂ ಇತರರು ವಾಹನ ನಿಲುಗಡೆ ಮಾಡಿ ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸುವ ನಿರ್ಧಾರವನ್ನು ದೇವಳದ ವ್ಯವಸ್ಥಾಪನಾ ಸಮಿತಿ ಕೈಗೊಂಡಿದೆ.

ಇತರರು ವಾಹನ ನಿಲುಗಡೆ ಮಾಡಿ ಹೋದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ದೇವಳದ ಎದುರಿನ ವಿಶಾಲವಾದ ಗದ್ದೆಯಲ್ಲಿ ಈತನಕ ದೇವಳಕ್ಕೆ ಬರುವ ಭಕ್ತರು ಮಾತ್ರವಲ್ಲದೆ ಬಹಳಷ್ಟು ಮಂದಿ ವಾಹನ ನಿಲುಗಡೆ ಮಾಡುತ್ತಿದ್ದರು. ಆದರೆ, ಇನ್ನು ಮುಂದೆ ಗದ್ದೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡಿ ಹೋಗುವಂತಿಲ್ಲ. ದೇವಳಕ್ಕೆ ಸೇರಿದ ಜಾಗದಲ್ಲಿ ಹಿಂದೂ ಭಕ್ತರಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿರುವುದು ಇಲ್ಲಿನ ಇತಿಹಾಸದಲ್ಲಿ ಹೊಸ ಬೆಳವಣಿಗೆಯಾಗಿದೆ.

ADVERTISEMENT

ಈಗಾಗಲೇ ಈ ಕುರಿತು ದೇವಳದ ಹೊರಭಾಗದಲ್ಲಿರುವ ಪಂಚಾಕ್ಷರಿ ಮಂಟಪದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ.

‘ಈ ದೇವಸ್ಥಾನವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು, ದೇವಳಕ್ಕೆ ಸಂಬಂಧಪಟ್ಟ ಜಾಗದಲ್ಲಿ ಹಿಂದೂ ಭಕ್ತರಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶವಿರುತ್ತದೆ. ಇತರರು ವಾಹನ ಪಾರ್ಕಿಂಗ್‌ ಮಾಡಿ ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಇತರರು ವಾಹನ ನಿಲುಗಡೆ ಮಾಡಿ ಹೋದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಸೂಚನಾ ಫಲಕದಲ್ಲಿ ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.