ADVERTISEMENT

ಪುತ್ತೂರು | ಶಿಕ್ಷಕಿಯ ನಿಂದಿಸಿದ ಶಾಸಕ ಕ್ಷಮೆಯಾಚಿಸಲಿ: ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:07 IST
Last Updated 9 ಜನವರಿ 2026, 3:07 IST
   

ಪುತ್ತೂರು: ‘ಶಿಕ್ಷಣ ಇಲಾಖೆಯಲ್ಲಿ 30 ವರ್ಷ ಕರ್ತವ್ಯ ನಿರ್ವಹಿಸಿರುವ ಅನುಭವಿ ಶಿಕ್ಷಕಿಯೊಬ್ಬರನ್ನು ಪುತ್ತೂರಿನ ಶಾಸಕ ಅವರ ಕಚೇರಿಗೆ ಕರೆಸಿಕೊಂಡು ಕಾಂಗ್ರೆಸ್ ನಾಯಕರ ಮುಂದೆ ಏಕವಚನದಲ್ಲಿ ನಿಂದಿಸಿ ದುರ್ವರ್ತನೆ ತೋರಿರುವುದು ಸರಿಯಲ್ಲ. ಸುಸಂಸ್ಕೃತ ಕುಟುಂಬದಲ್ಲಿ ಬೆಳೆದು ಬಂದಿರುವ ಶಾಸಕರ ಬಾಯಿಯಿಂದ ಈಗ ಬರುತ್ತಿರುವ ಮಾತುಗಳು ಮತ್ತು ಅವರ ಇತ್ತೀಚಿನ ನಡವಳಿಕೆ ನೋಡಿದಾಗ ಜನರಿಂದ ಆಯ್ಕೆಯಾದ ಶಾಸಕ ಎಂಬುದನ್ನು ಅವರು ಮರೆತಂತಿದೆ’ ಎಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಆರೋಪಿಸಿದರು.

ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಗನ್ನೂರು ಪಂಚಾಯಿತಿ ವ್ಯಾಪ್ತಿಯ ಕೊಲ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರನ್ನು ಅವಮಾನಿಸಲಾಗಿದೆ ಎಂದು ನೀಡಿದ ಸುಳ್ಳು ಮಾಹಿತಿ ಆಧರಿಸಿ ಶಿಕ್ಷಕಿಯನ್ನು ಕಚೇರಿಗೆ ಕರೆಸಿಕೊಂಡು ನಿಂದಿಸಿದ ಶಾಸಕ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಬಿಜತ್ರೆ ಮಾತನಾಡಿ, ಶಾಸಕರ ದುವರ್ತನೆ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.

ADVERTISEMENT

ಬಡಗನ್ನೂರು ಪಂಚಾಯಿತಿ ಸದಸ್ಯ ಸಂತೋಷ್ ಆಳ್ವ ಗಿರಿಮನೆ ಮಾತನಾಡಿ, ಶಾಲಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಯಾವುದೇ ಗಣ್ಯರ ಹೆಸರು ಇರಲಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರೇ ಕಾರ್ಯಕ್ರಮ ಉದ್ಘಾಟಿಸಿದ್ದರು. ಪಂಚಾಯಿತಿ ಅಧ್ಯಕ್ಷರು ಮತ್ತು ನಾನು ವೇದಿಕೆಯಲ್ಲೇ ಇದ್ದೆವು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರ ಬಗ್ಗೆ ಯಾರೂ ಮಾತನಾಡಿಲ್ಲ. ಶಾಸಕರನ್ನು ಅವಮಾನಿಸುವ ಘಟನೆಯೇ ನಡೆದಿಲ್ಲ. ಹೀಗಿದ್ದರೂ ಶಾಸಕ ಶಿಕ್ಷಕಿಯನ್ನು ಕರೆಸಿಕೊಂಡು ಅವರ ವಿರುದ್ಧ ವಾಗ್ದಾಳಿ ನಡೆಸಿರುವುದು, ಶಿಕ್ಷಕಿಯ ವಿರುದ್ಧ ಶಾಸಕ ಮಾತನಾಡಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ’ ಎಂದರು.

ಬಡಗನ್ನೂರು ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಬಿಜೆಪಿ ಪ್ರಮುಖರಾದ ಹರಿಪ್ರಸಾದ್ ಯಾದವ್, ನಿತೀಶ್ ಕುಮಾರ್ ಶಾಂತಿವನ, ವಿದ್ಯಾಧರ್ ಜೈನ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.