ಪುತ್ತೂರು ತಾಲ್ಲೂಕಿನ ಅಭಿಮಾನಿ ಬಳಗದ ವತಿಯಿಂದ ನಡೆದ ಸಭೆಯಲ್ಲಿ ಸತ್ಯಜಿತ್ ಸುರತ್ಕಲ್ ಮಾತನಾಡಿದರು. ಜಯಂತ್ ಪೂಜಾರಿ ಆಲಂಕಾರು, ಜನಾರ್ದನ ಪೂಜಾರಿ ಪದಡ್ಕ, ಸಂದೀಪ್ ಪಂಪ್‌ವೆಲ್ ಭಾಗಹಿಸಿದ್ದರು
ಪುತ್ತೂರು: ಕಾರ್ಯಕರ್ತರ ಒತ್ತಡದಂತೆ ಹಿಂದುತ್ವವಾದಿ ಹೋರಾಟಗಾರರಿಗೆ ನ್ಯಾಯ ಸಿಗಬೇಕು. ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಅವಕಾಶ ಸಿಗಬೇಕು ಎಂಬ ಅಭಿಮಾನಿಗಳು, ಲೋಕಸಭಾ ಸ್ಥಾನಕ್ಕೆ ಅವಕಾಶ ನೀಡುವಂತೆ ಹೋರಾಟ ನಡೆಸುತ್ತಿದ್ದಾರೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.
‘ಈ ಬಾರಿ ನಮ್ಮೆಲ್ಲರ ಆಯ್ಕೆ ಸತ್ಯಜಿತ್ ಸುರತ್ಕಲ್’ ಎಂಬ ಹೆಸರಿನಲ್ಲಿ ಪುತ್ತೂರು ತಾಲ್ಲೂಕಿನ ಅಭಿಮಾನಿ ಬಳಗದ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘37 ವರ್ಷಗಳಿಂದ ಸಂಘ, ಸಂಘಟನೆ, ಪಕ್ಷ ಎಂದು ಜೀವನ ಮುಡಿಪಾಗಿಟ್ಟಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ಆದರೆ, ನನ್ನನ್ನು ಹೊರ ಹಾಕುವ ಪ್ರಯತ್ನ ನಡೆಯಿತು. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಯಿತು. ಆದರೂ ನಾನು ಪಕ್ಷದ ಕುರಿತು ಯಾವುದೇ ಆರೋಪ ಮಾಡಿಲ್ಲ. ಹೀಗಿದ್ದರೂ ಸತ್ಯ ಮಾಡಿದ ತಪ್ಪಾದರೂ ಏನು’ ಎಂದು ಅವರು ಬಿಜೆಪಿಗರನ್ನು ಪ್ರಶ್ನಿಸಿದರು.
ಸಂಸದ ಸ್ಥಾನ 2–3 ಸಲದ ನಂತರ ಬದಲಾವಣೆ ಆಗುತ್ತದೆ. ಕಾರ್ಯಕರ್ತರ ಆಧಾರದಲ್ಲಿ ಸಂಘದ ವ್ಯವಸ್ಥೆಯಲ್ಲಿರುವ ಜಿಲ್ಲೆಯಲ್ಲಿ ಈಗಿರುವ ಸಂಸದರಿಗೆ ಮೂರು ಬಾರಿ ಅವಕಾಶ ಸಿಕ್ಕಿದೆ. ಹಾಗಾಗಿ ಈ ಬಾರಿ ಬದಲಾವಣೆ ಆಗಬೇಕು. 2ನೇ ಬಾರಿಗೆ ಅವರಿಗೆ ಅವಕಾಶ ನೀಡುವ ವೇಳೆ ಗೊಂದಲ ಉಂಟಾದಾಗ ಸಂಘದ ಜವಾಬ್ದಾರಿ ನೆಲೆಯಲ್ಲಿ ಪರಿಹಾರ ಮಾಡಲು ನಾನು ಹೋಗಿದ್ದೆ’ ಎಂದರು.
ಗಿರೀಶ್ ಪಡ್ಡಾಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದರ್ಶನ್ ಪುತ್ತೂರು, ಸತ್ಯಜಿತ್ ಸುರತ್ಕಲ್ ಬೆಂಬಲಿಗರಾದ ಜಯಂತ್ ಪೂಜಾರಿ ಆಲಂಕಾರು, ಜನಾರ್ದನ ಪೂಜಾರಿ ಪದಡ್ಕ, ಸಂದೀಪ್ ಪಂಪ್‌ವೆಲ್ ಇದ್ದರು. ಪ್ರವೀಣ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.