ಪೊಲೀಸ್ – ಪ್ರಾತಿನಿಧಿಕ ಚಿತ್ರ
ಪುತ್ತೂರು: ಕೆಂಪು ಕಲ್ಲಿನ ಕ್ವಾರಿಯಲ್ಲಿ ಯಂತ್ರದ ಮೂಲಕ ಕಲ್ಲು ಕತ್ತರಿಸುತ್ತಿದ್ದಾಗ ಯಂತ್ರದ ರಾಟೆ ಬೇರ್ಪಟ್ಟು ಹೊಟ್ಟೆಯ ಪಕ್ಕೆಲುಬು ಭಾಗಕ್ಕೆ ಬಿದ್ದು ಅಸ್ಸಾಂ ಮೂಲದ ಕೂಲಿಕಾರ್ಮಿಕ ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಮೈಕುಲೆ ಎಂಬಲ್ಲಿ ನಡೆದಿದೆ.
ಅಸ್ಸಾಂನ ಉದಲ್ ಗುರಿ ಜಿಲ್ಲೆಯ ಕೊಯಿರಭಾರಿ ಸಮೀಪದ ಜಬಾಂಗ್ ಪಥರ್ ನಿವಾಸಿ ಬುದ್ರಮ್ ಬೊರೊ ಅವರ ಪುತ್ರ ಪ್ರದೀಪ್ ಬೊರೊ (27) ಮೃತಪಟ್ಟವರು. ಮೈಕುಲೆ ಎಂಬಲ್ಲಿ ಪ್ರಜನ್ ಎಸ್.ಶೆಟ್ಟಿ ಎಂಬುವರ ಕೆಂಪು ಕಲ್ಲಿನ ಕ್ವಾರಿಯಲ್ಲಿ ಅವಘಡ ನಡೆದಿದೆ.
ಘಟನೆಗೆ ಸಂಬಂಧಿಸಿ ಪ್ರದೀಪ್ ಅವರ ಸಹೋದರ ತಪೋನ್ ಬೊರೊ ಎಂಬುವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಂಭೀರ ಗಾಯಗೊಂಡಿದ್ದ ಪ್ರದೀಪ್ ಅವರನ್ನು ಕಲ್ಲಿನ ಕಲ್ವಾರಿ ಮಾಲೀಕನ ತಂದೆ ಹಾಗೂ ಉಳಿದ ಕಾರ್ಮಿಕರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮೈಕುಲೆಯ ಕಲ್ಲಿನ ಕ್ವಾರಿಗೆ ಮಂಗಳವಾರ ಗಣಿ ಇಲಾಖೆಯಿಂದ ಪರವಾನಗಿ ಲಭಿಸಿ ಬುಧವಾರ ಕೆಲಸ ಪ್ರಾರಂಭಿಸಿದ್ದರು. ಕ್ವಾರಿ ಮಾಲೀಕ ಕಲ್ಲು ಕತ್ತರಿಸುವ ಯಂತ್ರವನ್ನು ಸರಿಯಾಗಿ ಪರಿಶೀಲಿಸದೆ, ಸುರಕ್ಷತಾ ಪರಿಕರ ನೀಡದೆ ನಿರ್ಲಕ್ಷ್ಯ ವಹಿಸಿರುವುದರಿಂದ ಅವಘಡ ನಡೆದಿದೆ. ಮಾಲೀಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
ಸಂಪ್ಯ ಠಾಣೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.