ADVERTISEMENT

ಮಂಗಳೂರು | ‘ಅಬ್ಬಕ್ಕ ಚರಿತ್ರೆ ಪರಿಚಯ–ಮಣೇಲ್‌ ನಾಂದಿಯಾಗಲಿ’

ಮಳಲಿ: 'ಮಣೇಲ್‌ದ ಪೆರ್ಮೆ ರಾಣಿ ಅಬ್ಬಕ್ಕ' ವಿಚಾರಕೂಟ ಉದ್ಘಾಟಿಸಿ ಪ್ರೊ.ಚಿನ್ನಪ್ಪ ಗೌಡ ಆಶಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 6:42 IST
Last Updated 15 ಡಿಸೆಂಬರ್ 2025, 6:42 IST
   

ಮಂಗಳೂರು: ರಾಣಿ ಅಬ್ಬಕ್ಕ ಚಾರಿತ್ರಿಕ ಸಾಧನೆಗಳ ಅಧ್ಯಯನ ದೊಡ್ಡ ಮಟ್ಟದಲ್ಲಿ ಇನ್ನೂ ನಡೆದಿಲ್ಲ. ಮುಂದಿನ ಪೀಳಿಗೆಗೆ  ಅಬ್ಬಕ್ಕನ ಸಮಗ್ರ ಚರಿತ್ರೆ ಪರಿಚಯಿಸುವ ಕೆಲಸ ಆಕೆ  ನಡೆದಾಡಿದ್ದ ಮಣೇಲ್ (ಮಳಲಿ) ಗ್ರಾಮದಿಂದಲೇ ಶುರುವಾಗಬೇಕು’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಕೆ.ಚಿನ್ನಪ್ಪ ಗೌಡ ಹೇಳಿದರು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಣೇಲ್‌ನ ರಾಣಿ ಅಬ್ಬಕ್ಕ ಚಾವಡಿ ಸಂಯುಕ್ತ ಆಶ್ರಯದಲ್ಲಿ ಮಳಲಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 'ಮಣೇಲ್‌ದ ಪೆರ್ಮೆ ರಾಣಿ ಅಬ್ಬಕ್ಕ' (ಮಳಲಿಯ ಹೆಮ್ಮೆ ರಾಣಿ ಅಬ್ಬಕ್ಕ) ವಿಚಾರಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ 'ಅಬ್ಬಕ್ಕ' ಸಾಂಸ್ಕೃತಿಕ ಗ್ರಾಮವನ್ನು ಕಟ್ಟುವ ಕಾರ್ಯ ನಡೆಯಬೇಕು. ಈ ಕಾರ್ಯ ರಾಣಿ ಅಬ್ಬಕ್ಕನ ಅರಮನೆ ಇದ್ದ, ವಿದೇಶಿ ಪ್ರವಾಸಿಗ  ಪಿಯಾತ್ರೊ ದಲ್ಲವೆಲ್ಲೆ ಅಬ್ಬಕ್ಕನನ್ನು ಭೇಟಿ ಮಾಡಿದ ಮಣೇಲ್‌ನಲ್ಲಿ ಅಬ್ಬಕ್ಕ ರಾಣಿಯ ಗ್ರಾಮೋತ್ಸವ ನಡೆಸಬೇಕು’ ಎಂದರು.  

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ‘ಅಬ್ಬಕ್ಕನ ಅರಮನೆಯ ಕುರುಹು ಮಳಲಿಯಲ್ಲಿರುವುದು ಬಹುತೇಕರಿಗೆ ತಿಳಿದಿಲ್ಲ. 135 ವರ್ಷಗಳ ಇತಿಹಾಸವಿರುವ ಮಳಲಿ ಶಾಲೆಯಲ್ಲಿ ಅಬ್ಬಕ್ಕ ವ್ಯಕ್ತಿತ್ವ ಕಟ್ಟಿಕೊಡುವ ಚಿತ್ರಗಳನ್ನು ಮೂಡಿಸಲಿದ್ದೇವೆ’ ಎಂದು ತಿಳಿಸಿದರು. 

ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ, ‘ಅಬ್ಬಕ್ಕನ ಕುರಿತ ಚಾರಿತ್ರಿಕ ಕುರುಹುಗಳನ್ನು ಸಂಗ್ರಹಿಸಬೇಕು’ ಎಂದರು.

ಇತಿಹಾಸ ತಜ್ಞ ಪುಂಡಿಕಾಯಿ ಗಣಪಯ್ಯ ಭಟ್, ‘1623 ರ ಡಿಸೆಂಬರ್ 5, 6 ಹಾಗೂ 7ನೇ ತಾರೀಕಿನಂದು ಇಟಲಿ ಪ್ರವಾಸಿ ಪಿಯಾತ್ರೊ ದಲ್ಲವೆಲ್ಲೆ ಮಣೇಲ್ ಗ್ರಾಮದಲ್ಲಿ ಅಬ್ಬಕ್ಕನನ್ನು ಮಾತನಾಡಿಸಿದ್ದ ಹಾಗೂ ಮಣೇಲ್ ಗ್ರಾಮದ ಪ್ರಾಕೃತಿಕ ಅಂಶಗಳನ್ನು ತನ್ನ ಕಥನದಲ್ಲಿ ಉಲ್ಲೇಖಿಸಿದ್ದ’ ಎಂದರು.

ಗಂಜಿಮಠ ಗ್ರಾ.ಪಂ.ಉಪಾಧ್ಯಕ್ಷೆ ಸಾರಮ್ಮ, ಕಟ್ಟೆಮಾರ್ ಮನೆತನದ ಪ್ರಶಾಂತ್ ಕುಮಾರ್ ಕಟ್ಟೆಮಾರ್, ಪಂಚಾಯತ್ ಮಾಜಿ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕ  ಮಹೇಶ್, ಚಿತ್ರ ಕಲಾವಿದ ಗಣೇಶ್ ಸೋಮಯಾಜಿ, ಗುಣಪಾಲ ಮೇಂಡ, ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಪೂಜಾರಿ, ಉಳಿಪಾಡಿಗುತ್ತು ಉದಯ ಕುಮಾರ್ ಆಳ್ವ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಅಕ್ಷಯ ಆರ್. ಶೆಟ್ಟಿ, ಬಾಬು ಕೊರಗ ಪಾಂಗಾಳ  ಭಾಗವಹಿಸಿದ್ದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಅಕ್ಷಯ್ ಕುಮಾರ್ ಜೈನ್ ನಿರೂಪಿಸಿದರು. ಶಿಕ್ಷಕ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಸಂಚಾಲಕ ಬೂಬ ಪೂಜಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.