
ಮೂಡುಬಿದಿರೆ: ರಾಣಿ ಅಬ್ಬಕ್ಕಳ ಮನೆತನ ಮತ್ತು ಚೌಟರ ಅರಮನೆ ನಮ್ಮ ಮುಂದಿರುವುದು ಹೆಮ್ಮೆಯ ವಿಷಯ. ವೀರ ರಾಣಿ ಅಬ್ಬಕ್ಕ ತುಳುನಾಡಿನ ಸ್ವಾಭಿಮಾನದ ಪ್ರತೀಕ ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ವೀರರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆ ಅಂಗವಾಗಿ ಕರ್ನಾಟ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಮಂಗಳೂರು ವಿಭಾಗ ಮತ್ತು ಶ್ರೀಧವಲತ್ರಯ ಜೈನ ಕಾಶಿ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಮೂಡುಬಿದಿರೆ ಮಹಾವೀರ ಭವನದಲ್ಲಿ ನಡೆದ ‘ಅಬ್ಬಕ್ಕ-500 ಪ್ರೇರಣಾದಾಯಿ ಉಪನ್ಯಾಸ ಸರಣಿ’ಯ 97ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಳ್ಳಾಲದ ರಾಣಿ ಅಬ್ಬಕ್ಕಳ ಶೌರ್ಯಗಾಥೆಯನ್ನು ಮುಂದಿನ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ, ಆಕೆಯ 500ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದಾದ್ಯಂತ 500 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘವು ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ನೂರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದುವರೆಗೆ 96 ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ ಎಂದರು.
ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ.ತುಕರಾಂ ಪೂಜಾರಿ ಉಪನ್ಯಾಸ ನೀಡಿದರು.
ಶಾಸಕ ಉಮಾನಾಥ ಎ.ಕೋಟ್ಯಾನ್ ಮಾತನಾಡಿ, ಕಂಬಳ ನಡೆಯುವ ಒಂಟಿಕಟ್ಟೆ ಪ್ರದೇಶಕ್ಕೆ ಹಿಂದಿನಿಂದಲೂ ‘ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ’ ಎಂಬ ಹೆಸರಿತ್ತು. ಜವನೆರ್ ಬೆದ್ರ ಸಂಘಟನೆಯ ಮನವಿಯಂತೆ ರಾಣಿ ಅಬ್ಬಕ್ಕಳ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಚೌಟರ ಅರಮನೆಯ ಮುಂಭಾಗ ಪ್ರತಿಮೆ ಲೋಕಾರ್ಪಣೆಗೊಂಡಿರುವುದು ಮೂಡುಬಿದಿರೆಗೆ ಹೆಮ್ಮೆ ತಂದಿದೆ ಎಂದರು.
ಅಬ್ಬಕ್ಕ ವಂಶಸ್ಥೆ, ಚೌಟರ ಅರಮನೆಯ ಹಿರಿಯ ಸದಸ್ಯೆ ಕೇಸರಿ ರತ್ನ ರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಚೌಟರ ಅರಮನೆಯ ಕುಲದೀಪ ಎಂ., ಡಿ.ಜೆ. ವಿದ್ಯಾವರ್ಧಕ ಸಂಘದ ಸಂಚಾಲಕ ಹೇಮರಾಜ್ ಬೆಳ್ಳಿ ಬೀಡು, ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ, ಸಂಯೋಜಕ ಶರಣ್ ಕುಮಾರ್ ಶೆಟ್ಟಿ, ಕೆ.ಆರ್.ಎಂ.ಎ.ಎಸ್.ಎಸ್. ಜಂಟಿ ಪ್ರಧಾನ ಕಾರ್ಯದರ್ಶಿ ಮಾಧವ ಎಂ.ಕೆ. ಭಾಗವಹಿಸಿದ್ದರು.
ಸಂಯೋಜಕಿ ಮಲ್ಲಿಕಾ ನಿರೂಪಿಸಿದರು. ಸೌಮ್ಯಶ್ರೀ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.