ADVERTISEMENT

ಕೇಂದ್ರ ಬಜೆಟ್‌ ನಿರೀಕ್ಷೆ: ರೈಲು ಮಾರ್ಗ ದ್ವಿಗುಣಕ್ಕೆ ಬೇಕು ಅನುದಾನ

ಸಂಧ್ಯಾ ಹೆಗಡೆ
Published 14 ಜನವರಿ 2026, 6:03 IST
Last Updated 14 ಜನವರಿ 2026, 6:03 IST
ಮಂಗಳೂರು ಸಂಟ್ರೆಲ್ ರೈಲು ನಿಲ್ದಾಣ 
ಮಂಗಳೂರು ಸಂಟ್ರೆಲ್ ರೈಲು ನಿಲ್ದಾಣ    

ಮಂಗಳೂರು: ಕೊಂಕಣ ರೈಲ್ವೆ ಮಾರ್ಗ ದ್ವಿಗುಣಗೊಳಿಸುವಿಕೆ (ಡಬ್ಲಿಂಗ್), ನಷ್ಟದ ಸುಳಿಗೆ ಸಿಲುಕಿರುವ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ, ನೈರುತ್ಯ ರೈಲ್ವೆ ವಲಯದ ಅಡಿಯಲ್ಲಿ ಮಂಗಳೂರು ಪ್ರತ್ಯೇಕ ವಿಭಾಗ ರಚನೆ ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಾದರೂ ಮನ್ನಣೆ ಸಿಗಬಹುದೇ ಎಂದು ಎದುರು ನೋಡುತ್ತಿದ್ದಾರೆ ಕರಾವಳಿಯ ರೈಲ್ವೆ ಪ್ರಯಾಣಿಕರು.

ವಾಣಿಜ್ಯ ನಗರಿಯಾಗಿರುವ ಮಂಗಳೂರಿಗೆ ಉದ್ಯೋಗಕ್ಕಾಗಿ ಬರುವ ವಲಸೆ ಕಾರ್ಮಿಕರು ರೈಲು ಪ್ರಯಾಣವನ್ನೇ ಅವಲಂಬಿಸಿದ್ದಾರೆ. ಪ್ರಮುಖ ಎರಡು ರೈಲ್ವೆ ನಿಲ್ದಾಣಗಳನ್ನು ಹೊಂದಿರುವ ಮಂಗಳೂರಿಗೆ ಬರುವ ಹಾಗೂ ಇಲ್ಲಿಂದ ಹೊರಡುವ ಹೆಚ್ಚಿನ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಇರುತ್ತದೆ. ಪ್ರಸ್ತುತ ಇರುವ ಕೊಂಕಣ ರೈಲು ಮಾರ್ಗದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ರೈಲುಗಳು ಪ್ರತಿನಿತ್ಯ ಸಂಚರಿಸುತ್ತವೆ. ಈ ಮಾರ್ಗದಲ್ಲಿ ಏಕಪಥ ಇದ್ದು, ಡಬ್ಲಿಂಗ್ ಆದರೆ, ಹೆಚ್ಚು ರೈಲು ಸಂಚಾರಕ್ಕೆ ಅನುಕೂಲ. ಮಂಗಳೂರು ತೋಕೂರಿನಿಂದ ಮುಂಬೈ ಸಮೀಪದ ರೋಹಾವರೆಗೆ ಹಳಿ ದ್ವಿಗುಣಗೊಳಿಸಿದರೆ, ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ. ಅಲ್ಲಲ್ಲಿ ಹಳಿ ಡಬ್ಲಿಂಗ್ ಕಾಮಗಾರಿ ನಡೆದಿದ್ದು, ಇದು ಪೂರ್ಣಪ್ರಮಾಣದಲ್ಲಿ ಆಗಬೇಕು ಎನ್ನುತ್ತಾರೆ ರೈಲ್ವೆ ಪ್ರಯಾಣಿಕರು.

ಕೊಂಕಣ ರೈಲ್ವೆ ನಿಗಮ ನಷ್ಟದಲ್ಲಿ ಮುನ್ನಡೆಯುತ್ತಿದೆ. ಇದನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಿದರೆ, ರೈಲ್ವೆ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಮಂಗಳೂರು– ಬೆಂಗಳೂರು ನಡುವೆ ಸಿಂಗಲ್ ಟ್ರ್ಯಾಕ್ ಇದ್ದು, ಹೊಸ ಟ್ರ್ಯಾಕ್ ನಿರ್ಮಾಣವಾಗಬೇಕು. ಬೆಂಗಳೂರು– ಮಂಗಳೂರು ನಡುವೆ ರೈಲ್ವೆ ಮಾರ್ಗ ಅಭಿವೃದ್ಧಿಯಾದರೆ ಸೂಪರ್ ಫಾಸ್ಟ್‌ ರೈಲು ಸಂಚಾರ ಸಾಧ್ಯವಾಗುತ್ತದೆ. ಇದರಿಂದ ಕರಾವಳಿಯ ಅಭಿವೃದ್ಧಿಗೆ ವೇಗ ಸಿಗುತ್ತದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.

ADVERTISEMENT

ಮಂಗಳೂರು ಸೆಂಟ್ರಲ್ ವಿಶ್ವದರ್ಜೆಯ ನಿಲ್ದಾಣವಾಗಿ ರೂಪುಗೊಳ್ಳಬೇಕು. ಮಂಗಳೂರು– ರಾಮೇಶ್ವರ, ಮಂಗಳೂರು– ಭಾವನಗರ್ (ಗುಜರಾತ್) ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದರೂ, ಇನ್ನೂ ರೈಲು ಸಂಚಾರ ಪ್ರಾರಂಭವಾಗಿಲ್ಲ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇವನ್ನು ಪ್ರಾರಂಭಿಸುವ ಬಗ್ಗೆ ಈ ಹಿಂದೆಯೇಭರವಸೆ ನೀಡಿದ್ದು, ಆದಷ್ಟು ಶೀಘ್ರ ಅನುಷ್ಠಾನಗೊಳ್ಳಬೇಕು. ಅಡ್ಯಾರ್ ಕೆಮ್ಮಿಂಜೆಯಲ್ಲಿ ರೈಲ್ವೆ ಕೆಳಸೇತುವೆ (ಅಂಡರ್‌ಪಾಸ್), ಫರಂಗಿಪೇಟೆಯಲ್ಲಿ ಕೆಳಸೇತುವೆ, ಫರಂಗಿಪೇಟೆ ಸ್ಟೇಷನ್ ಅಭಿವೃದ್ಧಿಗೆ ಆದ್ಯತೆ ಸಿಗಬೇಕಾಗಿದೆ ಎಂದು ಅವರು ಹೇಳಿದರು.

ಮಂಗಳೂರು– ಬೆಂಗಳೂರು ನಡುವೆ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲು ಪ್ರಾರಂಭಕ್ಕೆ ಹಸಿರು ನಿಶಾನೆ ದೊರೆತಿದೆ. ಪಡೀಲ್– ಸುಬ್ರಹ್ಮಣ್ಯ ರೋಡ್, ಸಕಲೇಶಪುರ– ಚಿಕ್ಕಬಾಣಾವರ ಭಾಗದಲ್ಲಿ ವೇಗ ಹೆಚ್ಚಿಸಿದರೆ, ಒಟ್ಟು ಪ್ರಯಾಣದ ಸಮಯ ಕಡಿಮೆ ಮಾಡಬಹುದು. ಇಲ್ಲವಾದಲ್ಲಿ, ಉಳಿದ ರೈಲುಗಳ ಪ್ರಯಾಣದ ಅವಧಿಗಿಂತ ಗರಿಷ್ಠ 1-2 ಗಂಟೆಗಳಷ್ಟು ಮಾತ್ರ ವಂದೇ ಭಾರತ್ ಬೇಗ ಓಡಬಹುದು. ಹೀಗಾಗಿ, ಹಳಿ ದ್ವಿಗುಣ ಹಾಗೂ ರೈಲಿನ ವೇಗ ಹೆಚ್ಚಳಕ್ಕೆ ಅಗತ್ಯ ಕ್ರಮಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ರೈಲು ಪ್ರಯಾಣಿಕರಾಗಿರುವ ಎಂಜಿನಿಯರ್ ಶ್ರೀಕರ ಬಿ.

ಬಜೆಟ್‌ನಲ್ಲಿ ಕರಾವಳಿ ಕರ್ನಾಟಕಕ್ಕೆ ಪ್ರತಿಬಾರಿ ಅನ್ಯಾಯವಾಗುತ್ತಿದೆ. ಕೇರಳ ತಮಿಳುನಾಡು ರಾಜ್ಯಗಳು ಸಿಂಹಪಾಲು ಪಡೆಯುತ್ತಿವೆ. ಈ ಬಾರಿ ನಾವು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೇವೆ.
– ಜಿ.ಕೆ.ಭಟ್ ರೈಲ್ವೆ ಹೋರಾಟಗಾರ

‘ನವಯುಗ ಎಕ್ಸ್‌ಪ್ರೆಸ್ ಪುನರಾರಂಭವಾಗಲಿ’

ಮಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣಿಕರ ಅನುಕೂಲಕ್ಕೆ ‘ವಂದೇ ಭಾರತ್’ ಸ್ಲೀಪರ್ ರೈಲು ಆರಂಭಿಸಬೇಕೆಂಬ ಪ್ರಯಾಣಿಕರ ಬೇಡಿಕೆಗೆ ಮನ್ನಣೆ ಸಿಗಲಿ. ಕೋವಿಡ್ –19 ಪೂರ್ವದಲ್ಲಿ ಸಂಚರಿಸುತ್ತಿದ್ದ ಮಂಗಳೂರು–ಕತ್ರಾ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಪುನರಾರಂಭಿಸಬೇಕು. ಈ ರೈಲನ್ನು ಹಾಸನ–ಅರಸೀಕೆರೆ–ಪುಣೆ ಮಾರ್ಗದಲ್ಲಿ ಸಂಚರಿಸುವಂತೆ ಮಾಡುವುದರಿಂದ ಉತ್ತರ ಭಾರತ ಸಂಪರ್ಕ ಸುಗಮವಾಗಲಿದೆ. ಮಂಗಳೂರು ದಕ್ಷಿಣ ಭಾಗದಲ್ಲಿರುವ ಉಳ್ಳಾಲ ನಿಲ್ದಾಣವನ್ನು ಟರ್ಮಿನಲ್ ಸ್ಟೇಷನ್ ಆಗಿ ಅಭಿವೃದ್ಧಿಪಡಿಸಿ ದಕ್ಷಿಣ ಭಾಗದಿಂದ ಬರುವ ರೈಲುಗಳ ಆರಂಭಿಕ ಮತ್ತು ಅಂತಿಮ ನಿಲ್ದಾಣವಾಗುವಂತೆ ಇದನ್ನು ರೂಪಿಸಬೇಕು ಎನ್ನುತ್ತಾರೆ ಮುಂಬೈ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿಸೋಜ.

‘ವಂದೇ ಭಾರತ್ ಸ್ಲೀಪರ್ ಬೇಡಿಕೆ’

ಮಂಗಳೂರು– ಬೆಂಗಳೂರು ನಡುವೆ ರೈಲ್ವೆ ಮಾರ್ಗ ವಿದ್ಯುದೀಕರಣ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾರಂಭಿಸುವಂತೆ ವಿನಂತಿಸಲಾಗಿದೆ. ಮುಂಬೈ– ಮಂಗಳೂರು ನಡುವೆ ಕೊಂಕಣ ರೈಲ್ವೆ ಡಬ್ಲಿಂಗ್ ಮುಂಬೈ– ಮಂಗಳೂರು ನಡುವೆ ವಂದೇ ಭಾರತ್ ಸ್ಲೀಪರ್ ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆ ವಿಲೀನ ಸೇರಿದಂತೆ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಬೇಡಿಕೆ ಇಡಲಾಗಿದೆ. ಬಜೆಟ್‌ ಆಚೆಯೂ ನಿರಂತರ ಪ್ರಯತ್ನ ಮುಂದುವರಿದಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.