ಮಂಗಳೂರು: ರೈಲ್ವೆ ನೇಮಕಾತಿ ಮಂಡಳಿಯು ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆ ನಗರದ ಬೋಂದೆಲ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಯಿತು.
ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಕೊಠಡಿಯ ಪ್ರವೇಶಪತ್ರದಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದರಿಂದ ಈ ನಿರ್ಬಂಧವನ್ನು ಮಂಡಳಿಯು ಕೈಬಿಟ್ಟಿತ್ತು. ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿ ಅಭ್ಯರ್ಥಿಗಳ ಗುರುತಿನ ದಾಖಲೆಗಳನ್ನು ಮಾತ್ರ ಪರಿಶೀಲಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಕಳುಹಿಸಿದರು.
ಈ ನಿರ್ಬಂಧವನ್ನು ಕೈಬಿಟ್ಟಿದ್ದರ ಹೊರತಾಗಿಯೂ ಕೆಲ ಮಹಿಳಾ ಅಭ್ಯರ್ಥಿಗಳು ಮಂಗಳಸೂತ್ರ, ಕಿವಿಯೋಲೆ ಮೂಗುಬೊಟ್ಟುಗಳನ್ನು ಕಳಚಿಟ್ಟು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು.
‘ಮಾರ್ಗಸೂಚಿಯಲ್ಲಿದ್ದ ಅಂಶಗಳನ್ನು ಪಾಲಿಸಿದ್ದೇವೆ. ಈ ನಿರ್ಬಂಧಗಳನ್ನು ಕೈಬಿಟ್ಟಿದ್ದು ಇವತ್ತು ತಿಳಿಯಿತು. ಸುಮ್ಮನೆ ಪರೀಕ್ಷಾ ಕೇಂದ್ರದಲ್ಲಿ ರಗಳೆ ಏಕೆ ಎಂದು ಕಿವಿಯೋಲೆ, ಮೂಗುತಿಗಳನ್ನು ಕಳಚಿಟ್ಟು ಬಂದೆ’ ಎಂದು ಮಹಿಳಾ ಅಭ್ಯರ್ಥಿಯೊಬ್ಬರು ತಿಳಿಸಿದರು.
‘ಈ ಪರೀಕ್ಷಾ ಕೇಂದ್ರದಲ್ಲಿ ಸೋಮವಾರದಿಂದ ಮೂರು ದಿನಗಳವರೆಗೆ ಪರೀಕ್ಷೆಗಳು ನಿಗದಿಯಾಗಿವೆ. ಪ್ರತಿ ದಿನ ಮೂರು ಪಾಳಿಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿ ಪಾಳಿಯಲ್ಲಿ 460 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪರೀಕ್ಷೆಗೆ ಹಾಜರಾದವರಲ್ಲಿ ಹೊರ ರಾಜ್ಯಗಳ, ಅದರಲ್ಲೂ ಕೇರಳದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೊರರಾಜ್ಯದ ಕೆಲವರು ಒಂದು ದಿನ ಮೊದಲೇ ನಗರವನ್ನು ತಲುಪಿ, ಹೋಟೆಲ್‌ಗಳಲ್ಲಿ ಉಳಿದುಕೊಂಡು ಪರೀಕ್ಷೆಗೆ ಹಾಜರಾದರು. ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕುಟುಂಬ ಸಮೇತ ಬಂದಿದ್ದರು.
‘ಇಲ್ಲಿಗೆ ಸಿಟಿಬಸ್ ವ್ಯವಸ್ಥೆ ಇರುವ ಬಗ್ಗೆ ಮಾಹಿತಿ ಇರಲಿಲ್ಲ. ನಗರದಿಂದ ಬೊಂದೆಲ್‌ಗೆ ಆಟೊರಿಕ್ಷಾದಲ್ಲಿ ಬರಬೇಕಾಯಿತು. ರೈಲ್ವೆ ನಿಲ್ದಾಣದ ಸಮೀಪದಲ್ಲಿ ಅಥವಾ ನಗರದ ಕೇಂದ್ರ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರ ಇರುತ್ತಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಅಭ್ಯರ್ಥಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.