ADVERTISEMENT

ಕುಕ್ಕೆ: ಭಾರಿ ಮಳೆ, ಎರಡು ದಿನ ಭಕ್ತರ ಪ್ರವೇಶ ನಿಷೇಧ

ದುಮ್ಮಿಕ್ಕಿದ ದರ್ಪಣತೀರ್ಥ ನದಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:09 IST
Last Updated 1 ಆಗಸ್ಟ್ 2022, 16:09 IST
ಆದಿಸುಬ್ರಹ್ಮಣ್ಯ ದೇವಳದ ಒಳಾಂಗಣಕ್ಕೆ ದರ್ಪಣತೀರ್ಥ ನದಿ ನೀರು ನುಗ್ಗಿರುವುದು
ಆದಿಸುಬ್ರಹ್ಮಣ್ಯ ದೇವಳದ ಒಳಾಂಗಣಕ್ಕೆ ದರ್ಪಣತೀರ್ಥ ನದಿ ನೀರು ನುಗ್ಗಿರುವುದು   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ ಹರಿದಿದ್ದು, ಕುಕ್ಕೆಯ ಆದಿಸುಬ್ರಹ್ಮಣ್ಯ ದೇವಳದ ಒಳಗೆ ನೀರು ಪ್ರವೇಶಿಸಿದೆ.

ಹೀಗಾಗಿ ಕುಕ್ಕೆ ದೇಗುಲಕ್ಕೆ ಎರಡು ದಿನ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಭಕ್ತರು ಸಹಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕೋರಿದ್ದಾರೆ.

ಕುಕ್ಕೆ ದೇವಳದ ಸಮೀಪ ಇರುವ ದರ್ಪಣತೀರ್ಥ ನದಿಯ ಸ್ನಾನ ಘಟ್ಟವು ಮುಳುಗಡೆಯಾಗಿದೆ. ಸಮೀಪದ ರುದ್ರಪಾದ ಸೇತುವೆಯು ಜಲಾವೃತಗೊಂಡಿದೆ. ಈ ಮಧ್ಯೆ ಸುಬ್ರಹ್ಮಣ್ಯ- ಪುತ್ತೂರು- ಮಂಜೇಶ್ವರ ಅಂತರರಾಜ್ಯ ಸಂಪರ್ಕ ರಸ್ತೆಯ ಸೇತುವೆಯು ಮುಳುಗಡೆಯಾಗುವ ಸಾಧ್ಯತೆ ಇದೆ.

ADVERTISEMENT

ದರ್ಪಣ ತೀರ್ಥ ನದಿಯ ತಟದಲ್ಲಿರುವ 12ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಮಕಾರು ಎಂಬಲ್ಲಿ ಭಾನುವಾರ ತಡರಾತ್ರಿ ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಹರಿದ ಪರಿಣಾಮ ಹೊಳೆಬದಿಯ 35ಕ್ಕೂ ಅಧಿಕ ಬೃಹತ್‌ ಮರಗಳು ನೀರು ಪಾಲಾಗಿವೆ. ಮರಗಳ ಗೆಲ್ಲು, ಸಿಪ್ಪೆಗಳು ಸೀಳಿದ್ದು ನೆರೆ ಪ್ರಮಾಣದ ಭೀಕರತೆಗೆ ಸಾಕ್ಷಿಯಾಗಿವೆ.

ಕಲ್ಮಕಾರಿನ ಕಡಮಕಲ್ಲು ಎಸ್ಟೇಟ್ ಮೇಲ್ಭಾಗದಲ್ಲಿ ಭೂಕುಸಿತ ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೂರು ಸೇತುವೆಗಳಿಗೂ ಹಾನಿಯಾಗಿದ್ದು, ಸಂಪರ್ಕ ಕಡಿತದ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.