ADVERTISEMENT

ಮಂಗಳೂರು: ಬರುತ್ತಿದೆ ಮುಂಗಾರು– ನಗರಗಳಲ್ಲಿ ಸಮಸ್ಯೆಗಳು ನೂರಾರು

ಚುನಾವಣೆ ನೆಪ– ಇನ್ನೂ ಶುರುವಾಗಿಲ್ಲ ಮಳೆಗಾಲಕ್ಕೆ ಪೂರ್ವತಯಾರಿ

ಪ್ರವೀಣ್‌ ಕುಮಾರ್‌ ಪಿ.ವಿ
Published 22 ಮೇ 2023, 6:13 IST
Last Updated 22 ಮೇ 2023, 6:13 IST
ಮಂಗಳೂರಿನಲ್ಲಿ ಮೇ 13ರಂದು  ಸುರಿದ ಮಳೆಯಿಂದಾಗಿ ಕೊಟ್ಟಾರಚೌಕಿಯಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯಿತು– ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಮೇ 13ರಂದು  ಸುರಿದ ಮಳೆಯಿಂದಾಗಿ ಕೊಟ್ಟಾರಚೌಕಿಯಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯಿತು– ಪ್ರಜಾವಾಣಿ ಚಿತ್ರ   

ಮಂಗಳೂರು: ಈ ಬಾರಿಯ ಮುಂಗಾರು ಮಾರುತ ಜೂನ್‌ 4ರಂದು ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದಾಗಿ ಒಂದೆರಡು ದಿನಗಳಲ್ಲೇ ದಕ್ಷಿಣ ಕನ್ನಡ ಜಿಲ್ಲೆಗೂ ಮುಂಗಾರು ಅಡಿ ಇಡಲಿದೆ. ಆದರೆ ಮಳೆಗಾಲದ ಸ್ವಾಗತಕ್ಕೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಇನ್ನೂ ಸನ್ನದ್ಧವಾದಂತಿಲ್ಲ.

ಕಳೆದ ಸಾಲಿನಲ್ಲಿ ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ  ಪ್ರವಾಹಗಳಿಂದಾಗಿ ಸೃಷ್ಟಿಯಾದ ಅವಾಂತರಗಳು ಅಷ್ಟಿಷ್ಟಲ್ಲ. ಮಳೆಗಾಲಕ್ಕೆ ಮುನ್ನವೇ ಕನಿಷ್ಠ ಚರಂಡಿಗಳ ಹೂಳೆತ್ತುವ ಮೂಲಕ ಮಳೆ ನೀರು ಸರಾಗವಾಗಿ ಹರಿಯುವುದಕ್ಕೆ ಅನುವು ಮಾಡಿಕೊಡಬೇಕಾದ ನಗರ ಸ್ಥಳೀಯ ಸಂಸ್ಥೆಗಳು ಚುನಾವಣೆಯ ನೆಪ ಹೇಳಿ ಈ ಮಳೆಗಾಲದ ಪೂರ್ವತಯಾರಿಯನ್ನು ಮರೆತೇ ಬಿಟ್ಟಿವೆ.

ಮಂಗಳೂರು ನಗರದಲ್ಲಿ ಮಳೆ ನೀರು ಹರಿಯುವ ಚರಂಡಿ ಹಾಗೂ ರಾಜಕಾಲುವೆಗಳ ಹೂಳೆತ್ತುವ ಕಾರ್ಯವನ್ನು ಮಹಾನಗರ ಪಾಲಿಕೆ ಇತ್ತೀಚೆಗಷ್ಟೇ ಆರಂಭಿಸಿದೆ. ರಾಜಕಾಲುವೆಗಳ ಹೂಳೆತ್ತುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ. ಆದರೆ, ರಸ್ತೆ ಪಕ್ಕದ ಮಳೆನೀರು ಚರಂಡಿಗಳನ್ನು ದುರಸ್ತಿ ಪಡಿಸುವ ಕೆಲಸ ಬಹುತೇಕ ಕಡೆ ಆಮೆಗತಿಯಲ್ಲಿ ನಡೆಯುತ್ತಿದೆ. ಕೆಲವೆಡೆ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ಮೇಲಕ್ಕೆತ್ತಿ ಅದರ ಪಕ್ಕದಲ್ಲೇ ರಾಶಿ ಹಾಕಲಾಗಿದೆ. ವಾರದ ಹಿಂದೆ ಸುರಿದ ಮಳೆಗೆ ಆ ಹೂಳು ಮತ್ತೆ ಚರಂಡಿಪಾಲಾಗಿದೆ.

ADVERTISEMENT

ಮೊದಲ ಮಳೆಯಾದಾಗ ನಗರದಲ್ಲಿ ಅನೇಕ ಕಡೆ ಚರಂಡಿ ಕಟ್ಟಿಕೊಂಡು ನೀರು ರಸ್ತೆಯಲ್ಲೇ ಹರಿದಿತ್ತು. ಮಳೆಯ ನೀರಿನ ಜೊತೆ ಕಸಕಡ್ಡಿಗಳು ಹರಿದುಬಂದು ಚರಂಡಿಗಳ ಮೋರಿಗಳ ಬಳಿ ಕಟ್ಟಿಕೊಂಡಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯವೂ ಆಗಿಲ್ಲ. 

‘ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಆರಂಭಿಸಿದ್ದೇವೆ. ಎರಡು ಮೂರು ವಾರ್ಡ್‌ಗಳನ್ನು ಸೇರಿ ಪ್ಯಾಕೇಜ್‌ ರೂಪಿಸಿ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಕೆಲವೆಡೆ ಹೂಳೆತ್ತುವ ಕೆಲಸ ಮುಗಿದಿದೆ’ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುರತ್ಕಲ್‌ ವ್ಯಾಪ್ತಿಯಲ್ಲಿ ಏಳು ಪ್ಯಾಕೇಜ್‌ಗಳಲ್ಲಿ ಮಳೆನೀರು ಚರಂಡಿ ದುರಸ್ತಿ ಕಾಮಗಾರಿ ಕೈಗೊಂಡಿದ್ದೇವೆ. 3 ಮೀಟರ್‌ಗಿಂತ ಅಗಲವಾಗಿರುವ ಎಲ್ಲ ರಾಜಕಾಲುವೆಗಳ ಹೂಳೆತ್ತಿದ್ದೇವೆ’ ಎಂದು ಎಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು.

ಇದು ಜಿಲ್ಲಾಕೇಂದ್ರದ ಪರಿಸ್ಥಿತಿಯಾದರೆ, ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿ ಮಳೆನೀರು ಹರಿಯುವ ಚರಂಡಿಗಳ ಹೂಳೆತ್ತುವ ಕಾರ್ಯ ಇನ್ನೂ ಶುರುವೇ ಆಗಿಲ್ಲ.

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಚರಂಡಿಗಳ ಹೂಳೆತ್ತುವ ಕಾರ್ಯ ಇನ್ನೂ ಆರಂಭವಾಗಿಲ್ಲ. ಇತ್ತೀಚೆಗೆ ಸುರಿದ ಮಳೆಗೆ ಅನೇಕ ಕಡೆ ರಸ್ತೆಯಲ್ಲೇ ನೀರು ಹರಿದು ಸಮಸ್ಯೆ ಉಂಟಾಗಿತ್ತು. ಕೋಟೆಕಾರು ಪಟ್ಟಣ ಪಂಚಾಯಿತಿ, ಸೋಮೇಶ್ವರ ಪುರಸಭೆಯ ವ್ಯಾಪ್ತಿಯಲ್ಲೂ ಇದೇ ಸ್ಥಿತಿ ಇದೆ. ಸೋಮೇಶ್ವರ ನಗರದ ಸಭೆಯಲ್ಲಿ ಹೊಸ ರಸ್ತೆಗಳು ನಿರ್ಮಿಸಿದ ಕಡೆ ಮಳೆನೀರು ಚರಂಡಿ ನಿರ್ಮಿಸಿಲ್ಲ. ಹಾಗಾಗಿ ಮಳೆಗಾಲದಲ್ಲಿ ಇಲ್ಲಿ ಸಮಸ್ಯೆ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲೂ ಮಳೆ ನೀರು ಚರಂಡಿಗಳ ಹೂಳೆತ್ತಿಲ್ಲ. ನಗರದ ರಸ್ತೆಗಳು ಮೊದಲೇ ಕಿರಿದಾಗಿವೆ. ಮಳೆಗಾಲಕ್ಕೆ ಮುನ್ನವೇ ಚರಂಡಿಗಳ ಹೂಳೆತ್ತದಿದ್ದರೆ ನೀರು ಹರಿವಿಗೆ ಸಮಸ್ಯೆ ಉಂಟಾಗಲಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಮೂಡುಬಿದಿರೆ ಪುರಸಭೆ  ವ್ಯಾಪ್ತಿಯಲ್ಲೂ ಎಲ್ಲೂಚರಂಡಿಗಳ ಹೂಳೆತ್ತುವ ಕೆಲಸ ನಡೆದಿಲ್ಲ. ರೋಟರಿ ಶಾಲೆ, ಹಾಗೂ ಬಸ್‌ ನಿಲ್ದಾಣದ ಬಳಿ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲೇ ನೀರು ನಿಲ್ಲುತ್ತದೆ ಎನ್ನುತ್ತಾರೆ ಸ್ಥಳೀಯರು.

ಸುಳ್ಯಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಚರಂಡಿ ಹೂಳೆತ್ತಿಲ್ಲ. ಇಲ್ಲಿನ ಹಳೆಗೇಟು ಹಾಗೂ ಜಟ್ಟಿಪಳ್ಳದ ಬಳಿ ಚರಂಡಿ ಕಟ್ಟಿಕೊಂಡು ಪ್ರತಿ ಮಳೆಗಾಲದ ಆರಂಭದಲ್ಲೂ ಸಮಸ್ಯೆ ಸೃಷ್ಟಿಯಾಗುತ್ತದೆ. ಇಂತಹ ಪ್ರದೇಶದಲ್ಲೂ ಚರಂಡಿಯ ಹೂಳೆತ್ತುವ ಕಾರ್ಯ ನಡೆದಿಲ್ಲ.

ಬೆಳ್ತಂಗಡಿ, ಮೂಲ್ಕಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಚರಂಡಿಯ ಹೂಳೆತ್ತಿಲ್ಲ. 

ಪ್ರವಾಹ ನಿವಾರಣೆ– ಈ ಸಲವೂ ಮರೀಚಿಕೆ
ಮಂಗಳೂರು ನಗರದಲ್ಲಿ ‌2022ರ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಪದೇ ಪದೇ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದ ತತ್ತರಿಸಿದ್ದ ನಗರದ ಜನರು ಪಾಲಿಕೆಯ ಬಗ್ಗೆ ಜನಪ್ರತಿನಿಧಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ತೋಡಿಕೊಂಡಿದ್ದರು. ಪ್ರವಾಹದ ಚಿತ್ರಗಳನ್ನು ಹಂಚಿಕೊಂಡು ‘ಸ್ಮಾರ್ಟ್‌ ಸಿಟಿ’ ಮಂಗಳೂರಿಗೆ ಸ್ವಾಗತ ಎಂದು ಟ್ರೋಲ್‌ ಮಾಡಿದ್ದರು. ಜನರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ಪ್ರವಾಹ ನಿಯಂತ್ರಣಕ್ಕೆ ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಂಡಿತ್ತು. ನಂತರ ತಜ್ಞರ ಮೂಲಕ ಅಧ್ಯಯನ ನಡೆಸಿ ಶಾಶ್ವತ ಕಾಮಗಾರಿ ಕೈಗೊಳ್ಳುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರು. ಅವುಗಳಿನ್ನೂ ಭರವಸೆಗಳಾಗಿಯೇ ಉಳಿದಿವೆ. ನಗರದಲ್ಲಿ ಪದೇ ಪದೇ ಪ್ರವಾಹ ಉಂಟಾಗುವ ಕೊಟ್ಟಾರಚೌಕಿ ಮಾಲೆಮಾರ್‌ ಪ್ರದೇಶದಲ್ಲಿ ಅಧ್ಯಯನ ನಡೆಸಿದ್ದ ಎನ್‌ಐಟಿಕೆ ತಜ್ಞರ ತಂದ ಇಲ್ಲಿನ ರಾಜಕಾಲುವೆಗಳ ಅಗಲ ಹೆಚ್ಚಿಸಲು ಸಲಹೆ ನೀಡಿತ್ತು. ಆದರೆ ಈ ಕಾರ್ಯ ನಡೆದಿಲ್ಲ. ಅದರ ಬದಲು ರಾಜಕಾಲುವೆಗಳ ಹೂಳೆತ್ತಿ ಕೆಲವೆಡೆ ಅವುಗಳ ತಡೆಗೋಡೆಗಳನ್ನು ಎತ್ತರಿಸಿ ಪ್ರವಾಹ ನಿಯಂತ್ರಿಸಲು ಪಾಲಿಕೆ ಮುಂದಾಗಿದೆ. ‘ಪ್ರವಾಹ ತಡೆಯುವ ಸಲುವಾಗಿ ಮಾಲೆಮಾರ್‌ ಕೊಟ್ಟಾರ ಚೌಕಿ ಪ್ರದೇಶಗಳಲ್ಲಿ ರಾಜಕಾಲುವೆಗಳ ತಡೆಗೋಡೆ ಎತ್ತರಿಸಲು ಹಾಗೂ ಹೂಳೆತ್ತುವುದಕ್ಕೂ ಟೆಂಡರ್‌ ಕರೆದಿದ್ದೇವೆ. ಮಳೆಗಾಲಕ್ಕೆ ಮುನ್ನವೇ ಆ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ. ತಿಳಿಸಿದರು. ‘ಕೊಟ್ಟಾರ ಚೌಕಿ ಹಾಗೂ ಮಾಲೇಮಾರ್‌ ಪ್ರದೇಶಗಳಲ್ಲಿ ರಾಜಕಾಲುವೆ ಪಕ್ಕದಲ್ಲೇ ಜನರು ಮೂರು– ನಾಲ್ಕು ದಶಕಗಳ ಹಿಂದೆ ಮನೆ ನಿರ್ಮಿಸಿಕೊಂಡಿದ್ದಾರೆ. ದಾಖಲೆಗಳ ಪ್ರಕಾರ ಅವರು ಒತ್ತುವರಿ ಮಾಡಿಕೊಂಡಿಲ್ಲ. ರಾಜಕಾಲುವೆಗಳನ್ನು ವಿಸ್ತರಿಸಲು ಭೂಸ್ವಾಧೀನ ನಡೆಸಬೇಕಾಗುತ್ತದೆ. ಸದ್ಯಕ್ಕೆ ಅಷ್ಟೊಂದು ಅನುದಾನ ಪಾಲಿಕೆಯಲ್ಲಿ ಲಭ್ಯ ಇಲ್ಲ. ಸರ್ಕಾರದಿಂದ ಈ ಉದ್ದೇಶಕ್ಕೆ ವಿಶೇಷ ಅನುದಾನ ಸಿಕ್ಕಿದರೆ ಶಾಶ್ವತ ಕಾಮಗಾರಿ ಕೈಗೊಳ್ಳಬಹುದು’ ಎಂದು ಎಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು.
ಬಲ್ಮಠದಲ್ಲಿ ಮಳೆನೀರು ಚರಂಡಿಯೊಂದರ ಜಾಲರಿಯಲ್ಲಿ ಕಸ ಕಡ್ಡಿ ಸಿಲುಕಿ ನೀರು ಕಟ್ಟಿಕೊಂಡಿರುವುದು
ನಗರದಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಶೇ 70ರಷ್ಟು ಪೂರ್ಣವಾಗಿದೆ
– ಕೆ.ಚನ್ನಬಸಪ್ಪ, ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ
ಹೆದ್ದಾರಿಗಳಲ್ಲೂ ಇವೆ ‘ಮುಳುಗುವ’ ತಾಣಗಳು
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಮಳೆಯಾದಾಗ ನೀರು ನಿಲ್ಲುವ ತಾಣಗಳು ಅನೇಕ ಕಡೆ ಇವೆ. ಮಂಗಳೂರು– ಬೆಂಗಳೂರು ಹೆದ್ದಾರಿಯಲ್ಲಿ ಅಡ್ಯಾರ್‌ನಲ್ಲಿ ಪ್ರತಿವರ್ಷವೂ ಪ್ರವಾಹದಿಂದ ಸಮಸ್ಯೆ ಉಂಟಾಗುತ್ತಿದೆ. ಜೋರು ಮಳೆಯಾದಾಗಲೆಲ್ಲ ಪಡೀಲ್‌ ರೈಲ್ವೆ ಕೆಳಸೇತುವೆ ಬಳಿಯಂತೂ ರಸ್ತೆಯಲ್ಲಿ ನಾಲ್ಕೈದು ಅಡಿಗಳಷ್ಟು ನೀರು ನಿಂತು ತಾಸುಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿಲ್ಲ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ನಾಡು ಕಿನ್ನಿಗೋಳಿ ಪರಿಸರದಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲುತ್ತದೆ. ಅಲ್ಲಿ ಇನ್ನೂ ಚರಂಡಿಯ ಹೂಳೆತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೊಕ್ಕೊಟ್ಟು ಜಂಕ್ಷನ್‌ ಹಾಗೂ ಕೋಟೆಕಾರ್‌ ಬಳಿಯ ಬೈಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಈ ಸಮಸ್ಯೆ ನಿವಾರಿಸಲೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಂಡಿಲ್ಲ. ಮಾಣಿ– ಮೈಸೂರು ಹೆದ್ದಾರಿ ಇಕ್ಕೆಲಗಳ ಚರಂಡಿಗಳ ಹೂಳೆತ್ತುವ ಕಾರ್ಯವೂ ಈ ಬಾರಿ ನಡೆದಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯ ಅಧಿಕಾರಿಗಳನ್ನು ಈ ಕುರಿತು ವಿಚಾರಿಸಿದರೆ ‘ಅನುದಾನದ ಕೊರತೆ ಇದೆ’ ಎಂದು ಉತ್ತರಿಸುತ್ತಾರೆ.

ಪೂರಕ ಮಾಹಿತಿ: ಶಶಿಧರ್‌ ರೈ ಕುತ್ಯಾಳ, ಮೋಹನ್‌ ಕುತ್ತಾರ್‌, ಪ್ರಸನ್ನ ಹೆಗ್ಡೆ, ಲೋಕೇಶ್ ಪೆರ್ಲಂಪಾಡಿ, ಗಣೇಶ್‌ ಬಿ. ಶಿರ್ಲಾಲು, ಮೋಹನ್‌ ಶ್ರೀಯಾನ್ ರಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.