ಪುತ್ತೂರು: ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಬೀಸಿದ ಸುಂಟರಗಾಳಿಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಹಲವು ಮರಗಳು ಉರುಳಿವೆ.
ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಿಆರ್‌ಸಿ ಕಾಲೊನಿಯಲ್ಲಿ ಮರವೊಂದು ಉರುಳಿ ರಬ್ಬರ್ ನಿಗಮಕ್ಕೆ ಸೇರಿದ ಕಟ್ಟಡದ ಎರಡು ವಾಸ್ತವ್ಯದ ಮನೆಗಳಿಗೆ ಹಾನಿಯಾಗಿದೆ, ಅಮರಾವತಿ ಮತ್ತು ತಂಗರಾಜ್ ಎಂಬುವರ ವಾಸ್ತವ್ಯದ ಮನೆಯ ಮೇಲೆ ಮರ ಉರುಳಿರುವುದರಿಂದ ಅವರಿಗೆ ವಾಸ್ತವ್ಯಕ್ಕೆ ಮನೆ ಇಲ್ಲದಾಗಿದೆ.
ಕೌಡಿಚ್ಚಾರು ಸಿಆರ್‌ಸಿ ಕಾಲೊನಿಯ ನಾಗಮ್ಮ ಎಂಬುವರ ಮನೆಯ ಚಾವಣಿ ಮೇಲೆ ಮರ ಬಿದ್ದು ಹಾನಿಯಾಗಿದೆ. ಪೇಚಾಯಿ, ಸೆಂದಿಲ್‌ಕುಮಾರ್ ಎಂಬುವರ ಮನೆಯ ಶೀಟುಗಳು ಹಾರಿಹೋಗಿವೆ. ರವಿರಾಜ್ ಎಂಬುವರ ಆಡಿನ ಕೊಟ್ಟಿಗೆಯ ಶೀಟುಗಳು ಹಾರಿಹೋಗಿದ್ದು, ಕಾಲೊನಿಯ ಹಲವು ಮನೆಗಳಿಗೆ ಹಾನಿಯಾಗಿದೆ.
ಕೌಡಿಚ್ಚಾರು-ಸುಳ್ಯಪದವು ರಸ್ತೆಯ ಬದಿಯಲ್ಲಿದ್ದ ಮರ ರಸ್ತೆಗೆ ಉರುಳಿದೆ. ಕಾವು ವಿದ್ಯುತ್ ಸಬ್ ಸ್ಟೇಷನ್ ಸಂಪರ್ಕಿಸುವ ವಿದ್ಯುತ್ ತಂತಿ ಮೇಲೆ ಕೌಡಿಚ್ಚಾರು ಸೇತುವೆಯ ಸಮೀಪ ಮರ ಉರುಳಿದೆ. ಮಾಡ್ನೂರು ಗ್ರಾಮದ ಬೆರ್ನಂತಿ ಎಂಬಲ್ಲಿ ಉಮೇಶ್ ಎಂಬುರವ ಕೊಟ್ಟಿಗೆಯ ಮೇಲೆ ಮರ ಉರುಳಿ ಕೊಟ್ಟಿಗೆಗೆ ಹಾನಿಯಾಗಿದೆ. ಬೆರ್ನಂತಿ ವ್ಯಾಪ್ತಿಯಲ್ಲಿ ಹಲವು ಮರಗಳು ಉರುಳಿವೆ.
ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ಸೌಮ್ಯಾ ಸುಬ್ರಹ್ಮಣ್ಯ, ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು, ಪಾಣಾಜೆ ವಲಯ ಅರಣ್ಯಾಧಿಕಾರಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.