
ಮಂಗಳೂರು: ಜಾನಪದ ಕಲಾವಿದರು ಪ್ರತಿಫಲ ಬಯಸದೆ ಸೇವೆಯಲ್ಲಿ ತೊಡಗಿರುತ್ತಾರೆ. ತುಳುನಾಡಿನ ಕಲಾವಿದರಾದ ಸಿಂಧೂ ಗುಜರನ್ ಹಾಗೂ ಉಮೇಶ್ ಪಂಬದ ಗಂಧಕಾಡು ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಮೂಲಕ ಗುರುತಿಸಿದ್ದು ಶ್ಲಾಘನೀಯ ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್ ನಿರ್ದೇಶಕ ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತದೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಳುವಿನ ಪಾಡ್ದನ ಜಾನಪದ ಮಹಾಕಾವ್ಯವಾಗಿದ್ದು ಅದನ್ನು ಹೇಳುವುದಲ್ಲ, ಕಟ್ಟುವುದು. ಪಾಡ್ದನ ಕಟ್ಟುವ ಕಲೆಗೆ ವಿಶಿಷ್ಟ ಚೌಕಟ್ಟು ಹಾಗೂ ಸ್ವರೂಪವಿದೆ. ಆ ಕಾರಣಕ್ಕಾಗಿ ಪಾಡ್ದನ ಕಲಾವಿದರು ಸ್ವತಂತ್ರ ಕವಿಗಳು ಪಾಡ್ದನ ಕವಿಗಳ ದಾಖಲೀಕರಣ ನಡೆಯಬೇಕಾಗಿದೆ ಎಂದು ಅವರು ಹೇಳಿದರು.
ದೈವಾರಧನೆಯೂ ತುಳುನಾಡಿನ ಆರಾಧನಾ ಶಕ್ತಿಯ ಮೂಲಸೆಲೆಯಾಗಿದ್ದು ಉಮೇಶ್ ಪಂಬದ ಅವರಂಥ ನೂರಾರು ದೈವಾರಾಧಕರು ಶತಮಾನಗಳಿಂದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ತುಳುನಾಡಿನ ಭೂತಾರಾಧನೆ ಪಡೆದಿರುವ ಜನಪ್ರಿಯತೆಯ ಹಿಂದೆ ಶತಮಾನಗಳ ಶ್ರದ್ಧೆಯ ಹಾಗೂ ಬದ್ಧತೆಯ ಪ್ರಯತ್ನ ಇದೆ ಎಂದು ಗಣನಾಥ ಉಲ್ಲೇಖಿಸಿದರು.
ಸಿಂಧೂ ಗುಜರನ್ ಹಾಗೂ ಉಮೇಶ್ ಪಂಬದ ಅವರೊಂದಿಗೆ ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಾಸುದೇವ ಬೆಳ್ಳೆ ಸಂವಾದ ನಡೆಸಿಕೊಟ್ಟರು. ಸಿಂಧೂ ಗುಜರನ್ ಅವರು ತೆಂಬರೆ ನುಡಿಸಿ ಪಾಡ್ದನ ಪ್ರಸ್ತುತಪಡಿಸಿದರು. ಉಮೇಶ್ ಮಾತನಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಅನಿಸಿಕೆ ವ್ಯಕ್ತಪಡಿಸಿದರು. ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.