ಉಜಿರೆ: ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರು ರಾಜಕೀಯ ಪ್ರಬುದ್ಧತೆ ಹೊಂದಿರದೆ, ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ಷಿತ್ ಶಿವರಾಂ ಅವರು ಶೇ 40 ಕಮಿಷನ್ ಆರೋಪ ಮಾಡಿದ್ದಾರೆ. ಸುಳ್ಳು ಆರೋಪಗಳೊಂದಿಗೆ ಗಾಳಿಯಲ್ಲಿ ಗುಂಡು ಹಾರಿಸುವ ವಿಫಲ ಯತ್ನ ಮಾಡುತ್ತಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಸಿಐಡಿ, ಎಸ್‌ಐಟಿ, ಲೋಕಯುಕ್ತ ಮೊದಲಾದ ಯಾವುದೇ ತನಿಖಾ ತಂಡದಿಂದ ತನಿಖೆ ಮಾಡಿಸಲಿ. ತಾನು ಎಲ್ಲವನ್ನೂ ಎದುರಿಸಲು ಸಿದ್ದ ಎಂದು ಸವಾಲು ಹಾಕಿದರು.
ಶಾಸಕರು ಕೆಡಿಪಿ ಸಭೆ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ. ಕೆಡಿಪಿ ಸಭೆ ಏಕೆ ಮಾಡುವುದು ಎಂಬ ಸಾಮಾನ್ಯ ಜ್ಞಾನವೂ ಅವರಿಗೆ ಇಲ್ಲ. ತಾಲ್ಲೂಕಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆ ಎಷ್ಟು, ಹೇಗೆ ಅನುಷ್ಠಾನಗೊಂಡಿದೆ ಎಂಬ ತಿಳಿವಳಿಕೆ ಇಲ್ಲ. ಪ್ರತಿದಿನ ಕನಿಷ್ಠ ಎರಡು ಮೂರು ದಿನಪತ್ರಿಕೆಗಳನ್ನು ಓದಲಿ ಎಂದು ಸಲಹೆ ನೀಡಿದ ಹರೀಶ್ ಪೂಂಜ, ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಂದ ಅಭಿವೃದ್ಧಿ ಕಾರ್ಯಗಳ ಸಮೀಕ್ಷೆ ಹಾಗೂ ಇಲಾಖಾವಾರು ಮಾಹಿತಿ ಕಲೆ ಹಾಕುವುದು ಕೆಡಿಪಿ ಸಭೆಯ ಉದ್ದೇಶವಾಗಿದೆ. ಚಹಾ, ಕಾಫಿ ಕೊಡಲು ಕೂಡಾ ತಾಲ್ಲೂಕು ಪಂಚಾಯಿತಿಯಲ್ಲಿ ಹಣ ಇಲ್ಲ ಎಂದು ಶಾಸಕರು ಆರೋಪಿಸಿದರು.
2018-2023ರ ಅವಧಿಯಲ್ಲಿ ತಾನು ಮೂರೂವರೆ ಸಾವಿರ ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಳೆಂಜ ಗ್ರಾಮದಲ್ಲಿ ಸರ್ವೆ ನಂಬರ್ 309ರಲ್ಲಿ 2014ರಲ್ಲಿ ಮೂವತ್ತು ಜನರಿಗೆ ಹಕ್ಕು ಪತ್ರ ಮಂಜೂರಾತಿ ಆಗಿದೆ. ಲೋಲಾಕ್ಷ ಗೌಡರ ಮನೆಕಟ್ಟುವಾಗ ಅರಣ್ಯಇಲಾಖಾ ಅಧಿಕಾರಿಗಳು ಅವರಿಗೆ ಉಪಟಳ ನೀಡಿದ್ದಾರೆ. ರಬ್ಬರ್ ಗಿಡಗಳನ್ನೂ ಕಿತ್ತು ಬಿಸಾಡಿದ್ದಾರೆ ಎಂದು ಶಾಸಕರು ಆರೋಪಿಸಿದರು. ಅರಣ್ಯ ಇಲಾಖೆಯವರು ಸರ್ವೆ ಮಾಡಿ ಗಡಿ ನಿಗದಿ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಹಾಗೂ ಯು.ಟಿ. ಖಾದರ್ ನಿರ್ದೇಶನದಂತೆ ಅರಣ್ಯ ಇಲಾಖೆ ಜಾಗದ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ನೀಡಿದೆ. ಕಳೆಂಜದಲ್ಲಿ 700 ಎಕರೆ ಜಾಗ ಅರಣ್ಯ ಇಲಾಖೆಗೆ ಹಾಗೂ 700 ಎಕರೆ ಭೂಮಿ ಕಂದಾಯ ಇಲಾಖೆಗೆ ಸೇರಿದ್ದು ಕಂದಾಯ ಇಲಾಖೆಯ ಜಾಗವನ್ನು ವಸತಿ ರಹಿತರಿಗೆ ನೀಡಬೇಕು. ರೆಖ್ಯ ಗ್ರಾಮದಲ್ಲಿ 150 ಜನ ಅನೇಕ ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಇದ್ದು, ಗ್ರಾಮದ ಜನರಿಗೆ 94 ಸಿ ಅಡಿಯಲ್ಲಿ ಹಕ್ಕುಪತ್ರ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯಸರ್ಕಾರ ಭ್ರಷ್ಟಾಚಾರದಲ್ಲಿ ತಲ್ಲೀನವಾಗಿದ್ದು ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದೆ. ರಾಜಕೀಯ ಚಪಲಕ್ಕಾಗಿ ಪೊಳ್ಳು ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬೆಳ್ತಂಗಡಿ ತಾಲ್ಲೂಕಿನ ವಿವಿಧ ಭಾಗಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದರೂ ಒಂದು ರೂಪಾಯಿ ಅನುದಾನ ನೀಡಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಂತ ಕೋಟ್ಯಾನ್, ಸೀತಾರಾಮ ಬೆಳಾಲು, ಜಯಾನಂದ ಗೌಡ ಬೆಳ್ತಂಗಡಿ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.