
ಮೂಡುಬಿದಿರೆ: ಚೌಟರ ರಾಣಿ ಅಬ್ಬಕ್ಕಳ 500ನೇ ಜನ್ಮಮಹೋತ್ಸವದ ಅಂಗವಾಗಿ ಇಲ್ಲಿನ ಜವನೆರ್ ಬೆದ್ರ ತಂಡದವರು ‘ಚೌಟರ ಅರಮನೆ’ಯ ಮುಂಭಾಗದ ಕಿರು ಉದ್ಯಾನದಲ್ಲಿ ನಿರ್ಮಿಸಿದ ರಾಣಿ ಅಬ್ಬಕ್ಕಳ ಪ್ರತಿಮೆ ನ.1ರಂದು ಲೋಕಾರ್ಪಣೆಗೊಳ್ಳಲಿದೆ.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜವನೆರ್ ಬೆದ್ರ ಫೌಂಡೇಷನ್ ‘ಸ್ವಚ್ಛ ಮೂಡುಬಿದಿರೆ’ ಪರಿಕಲ್ಪನೆಯಡಿ ‘ಕ್ಲೀನ್ ಅಪ್ ಮೂಡುಬಿದಿರೆ ಅಭಿಯಾನ’ ಆರಂಭಿಸಿತ್ತು. ಅಭಿಯಾನದ 100ನೇ ವಾರದ ನೆನಪಿಗಾಗಿ ಅರಮನೆ ಮುಂಭಾಗ ಕಿರು ಉದ್ಯಾನ ಸ್ಥಾಪಿಸಿದ್ದು ಅಲ್ಲಿ ಸುಮಾರು 6 ಅಡಿ ಎತ್ತರದ ರಾಣಿ ಅಬ್ಬಕ್ಕಳ ನಿಂತ ಭಂಗಿಯ ಪ್ರತಿಮೆ ನಿರ್ಮಿಸಲಾಗಿದೆ. ಕುಂಬಳೆಯ ಶಿಲ್ಪಿ ವೇಣುಗೋಪಾಲ್ ಪ್ರತಿಮೆ ರಚಿಸಿದ್ದಾರೆ. ರಾಣಿ ಅಬ್ಬಕ್ಕಳ ಇತಿಹಾಸವನ್ನು ನೆನಪಿಸುವ ಈ ಪ್ರತಿಮೆ ನಿರ್ಮಾಣಕ್ಕೆ ಚೌಟರ ಅರಮನೆಯ ಕುಲದೀಪ್ ಎಂ. ಪ್ರೋತ್ಸಾಹ ನೀಡಿದ್ದಾರೆ.
ರಾಣಿ ಅಬ್ಬಕ ಕಿರು ಉದ್ಯಾವನದ ಪುನರ್ ನಿರ್ಮಾಣದ ಅಂಗವಾಗಿ ಚೌಟರ ಮನೆತನದ ಆಡಳಿತದಲ್ಲಿರುವ ಪುತ್ತಿಗೆ ಸೋಮನಾಥ ದೇವಸ್ಥಾನದಲ್ಲಿ ಜವನೆರ್ ಬೆದ್ರ ಸಂಘಟನೆ ಪೂಜೆ ಸಲ್ಲಿಸಿದ ಬಳಿಕ ಉದ್ಯಾನದಲ್ಲಿದ್ದ ಹಳೆಯ, ಸಣ್ಣ ವಿಗ್ರಹವನ್ನು ತೆಗೆದು ರಾಣಿ ಅಬ್ಬಕ್ಕಳ ನೂತನ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಗಿತ್ತು.
2019ರ ಡಿಸೆಂಬರ್‌ನಲ್ಲಿ ಮೂಡುಬಿದಿರೆಯಲ್ಲಿ ನಡೆದ ಕಂಬಳದಲ್ಲಿ ಜವನೆರ್ ಬೆದ್ರ ತಂಡ ರಾಣಿ ಅಬ್ಬಕ್ಕಳ ಭಾವ ಚಿತ್ರ ಇರಿಸಿತ್ತು. ಅತಿಥಿಗಳು ಈ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದ್ದರು. ಅದೇ ಸಂದರ್ಭ ಒಂಟಿಕಟ್ಟೆಯಲ್ಲಿ ರಾಣಿ ಅಬ್ಬಕ್ಕಳ ಪ್ರತಿಮೆ ನಿರ್ಮಿಸಬೇಕೆಂದು ಜವನೆರ್ ಬೆದ್ರ ಸಂಘಟನೆಯು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮನವಿ ಸಲ್ಲಿಸಿತ್ತು. ಒಂದು ತಿಂಗಳ ಅವಧಿಯಲ್ಲಿ ಜವನೆರ್ ಬೆದ್ರ ಚೌಟರ ಅರಮನೆ ಮುಂಭಾಗ ಅಬ್ಬಕ್ಕಳ ಸಣ್ಣ ಪ್ರತಿಮೆ ನಿರ್ಮಿಸಿತ್ತು. ಇತ್ತೀಚೆಗೆ ಹಳೆ ಪ್ರತಿಮೆ ತೆಗೆದು ಅಲ್ಲಿ ಹೊಸ ಪ್ರತಿಮೆ ನಿರ್ಮಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ನ.1ರಂದು ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ.
ಮೂಡುಬಿದಿರೆಯ ಮಣ್ಣಿನ ಮಗಳು ರಾಣಿ ಅಬ್ಬಕ್ಕಳ ಪ್ರತಿಮೆ ಇಲ್ಲಿನ ಚೌಟರ ಅರಮನೆಯ ಮುಂಭಾಗದಲ್ಲೇ ನಿರ್ಮಿಸಲು ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಅರಮನೆಯವರು ಹಾಗೂ ದಾನಿಗಳ ಸಹಕಾರದಿಂದ ಈ ಪ್ರತಿಮೆ ನಿರ್ಮಾಣವಾಗಿದೆ ಎಂದು ಜವನೆರ್ ಬೆದ್ರ ಫೌಂಡೇಷನ್‌ನ ಸ್ಥಾಪಕ ಅಮರ್ ಕೋಟೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.