ಮಂಗಳೂರು: ಬಾಲಕಿಯನ್ನು ಆಟೊರಿಕ್ಷಾದಲ್ಲಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಜ್ಪೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲ್ಲೂಕಿನ ಕನ್ನಡಿಕಟ್ಟೆ-ಮೇಲಂತಬೆಟ್ಟು ನಿವಾಸಿ ಮನೋಜ್ ಶೆಟ್ಟಿ ಬಂಧಿತ ಆರೋಪಿ.
2011ರ ಜೂನ್ 24ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗುತ್ತಿದ್ದ ವೇಳೆ, ಆರೋಪಿ ಮತ್ತು ಆತನ ಸ್ನೇಹಿತ ದಿನೇಶ್ ಆಟೊರಿಕ್ಷಾದಲ್ಲಿ ಬಂದು, ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದರು. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಇದನ್ನು ಯಾರ ಬಳಿಯಾದರೂ ಹೇಳಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಮಂಗಳೂರು ಉತ್ತರ ಉಪ ವಿಭಾಗದ ಈ ಹಿಂದಿನ ಎಸಿಪಿ ಪುಟ್ಟ ಮಾದಯ್ಯ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ಹೈಕೋರ್ಟ್‌ನಲ್ಲಿ ಜಾಮೀನು ಪಡೆದ ಆರೋಪಿ, ವಿಚಾರಣೆ ವೇಳೆ ನ್ಯಾಯಾಲಯದ ಎದುರು ಹಾಜರಾಗದೆ ತಲೆಮರೆಸಿಕೊಂಡಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯವು 2ನೇ ಆರೋಪಿ ದಿನೇಶ್‌ಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 10 ಸಾವಿರ ದಂಡ ವಿಧಿಸಿತ್ತು. ಪ್ರಮುಖ ಆರೋಪಿ ವಿರುದ್ಧ ‘ಎಲ್‌ಪಿಸಿ’ ವಾರೆಂಟ್ ಹೊರಡಿಸಲಾಗಿತ್ತು. ಆರೋಪಿಯು ತನ್ನ ಮೂಲ ಹೆಸರನ್ನು ಬದಲಾಯಿಸಿಕೊಂಡು, ಬೆಳ್ತಂಗಡಿ ತಾಲ್ಲೂಕಿನ ಕನ್ನಡಿಕಟ್ಟೆಯಲ್ಲಿ ವಾಸಿಸುತ್ತಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಬಜ್ಪೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಆರೋಪಿಯನ್ನು ಬಂಧಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಪಿಎಸ್‌ಐ ಪೂವಪ್ಪ ಹಾಗೂ ಅಪರಾಧ ಪತ್ತೆ ವಿಭಾಗದ ಎಎಸ್‌ಐ ರಾಮ ಪೂಜಾರಿ, ಸಿಬ್ಬಂದಿ ರಶೀದ್ ಶೇಖ್, ಸಿದ್ದಲಿಂಗಯ್ಯ ಹಿರೇಮಠ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.