ADVERTISEMENT

ಊರಬಾಲೆ ಉಳಿಸಲು ಎದ್ದು ನಿಂತ ನಾಡ ಜನ

ತಲಸ್ಸೇಮಿಯಾದಿಂದ ಬಳಲುತ್ತಿರುವ ವಿದ್ಯಾರ್ಥಿನಿಯ ಚಿಕಿತ್ಸೆಗೆ ಹಣ ಸಂಗ್ರಹ; ಗ್ರಾಮಗಳಲ್ಲಿ ಅಭಿಯಾನ

ವಿಕ್ರಂ ಕಾಂತಿಕೆರೆ
Published 7 ಜುಲೈ 2022, 20:15 IST
Last Updated 7 ಜುಲೈ 2022, 20:15 IST
ಕುಂಬಡಾಜೆ ಪಂಚಾಯತ್ ಐಸಿಡಿಎಸ್ ಮೇಲುಸ್ತುವಾರಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಚೆಕ್ ಹಸ್ತಾಂತರಿಸಿದರು
ಕುಂಬಡಾಜೆ ಪಂಚಾಯತ್ ಐಸಿಡಿಎಸ್ ಮೇಲುಸ್ತುವಾರಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಚೆಕ್ ಹಸ್ತಾಂತರಿಸಿದರು   

ಮಂಗಳೂರು: ಭಾರಿ ಮುಸಲಧಾರೆಯ ನಡುವೆ ಗಡಿನಾಡು ಕಾಸರಗೋಡಿನ ಕುಂಬ್ಡಾಜೆ ಮತ್ತು ಸುತ್ತಮುತ್ತಲ ಗ್ರಾಮದ ಜನರು ಹೃದಯದಾಳದಿಂದ ಮೊಗೆದ ವಾತ್ಸಲ್ಯದ ಜಲದಿಂದ ಕರುಣೆಯ ಕೊಡ ತುಂಬುತ್ತಿದ್ದಾರೆ. ಏಳು ವರ್ಷದ ಬಾಲೆ ಸಾನ್ವಿಯ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಅವರೆಲ್ಲರೂ.

ತಲಸ್ಸೇಮಿಯಾದಿಂದ ಬಳಲುತ್ತಿರುವ ಸಾನ್ವಿಗೆ ಅಸ್ಥಿ ಮಜ್ಜೆ ಕಸಿ (ಬೋನ್ ಮ್ಯಾರೊ ಟ್ರಾನ್ಸ್‌ಪ್ಲಾಂಟೇಷನ್) ಚಿಕಿತ್ಸೆಗೆ ತಗಲುವ ಮೊತ್ತ ಸಂಗ್ರಹಿಸಲು ಊರಿಗೆ ಊರೇ ಎದ್ದುನಿಂತಿದ್ದು ಜೂನ್ ಕೊನೆ ವಾರದಲ್ಲಿ ಆರಂಭವಾದ ಹಣ ಸಂಗ್ರಹ ಅಭಿಯಾನದಲ್ಲಿ ಈಗಾಗಲೇ ಸುಮಾರು ₹ 20 ಲಕ್ಷದಷ್ಟು ಕಲೆ ಹಾಕಲಾಗಿದ್ದು ಇನ್ನು ₹ 20 ಲಕ್ಷದಷ್ಟು ಮೊತ್ತದ ಗುರಿಯತ್ತ ದಾಪುಗಾಲು ಹಾಕಿದ್ದಾರೆ.

ಕುಂಬ್ಡಾಜೆ ಗ್ರಾಮದ ಕಜಮಲೆ ನಿವಾಸಿ ಉದಯ ಮತ್ತು ಸವಿತಾ ದಂಪತಿಯ ಪುತ್ರಿ ಸಾನ್ವಿ, ನಾರಂಪಾಡಿ ಫಾತಿಮಾ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ. ಸಣ್ಣಂದಿನಲ್ಲೇ ತಲಸ್ಸೇಮಿಯಾದಿಂದ ಬಳಲುತ್ತಿದ್ದ ಆಕೆಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅಸ್ಥಿ ಮಜ್ಜೆ ಕಸಿ ನಡೆಸಲೇಬೇಕು ಎಂದು ವೈದ್ಯರು ತಿಳಿಸಿದ ನಂತರ ದಂಪತಿ ಚಿಂತೆಗೆ ಒಳಗಾಗಿದ್ದಾರೆ. ಕೂಲಿ ಕೆಲಸ ಮಾಡುತ್ತಿರುವ ಅವರ ಅಳಲು ಕಂಡು ಗ್ರಾಮಪಂಚಾಯತ್‌ ಜೂನ್ 19ರಂದು ಸಾನ್ವಿ ವೈದ್ಯಕೀಯ ಚಿಕಿತ್ಸಾ ಸಮಿತಿಯನ್ನು ರಚಿಸಿತು. ಒಂದು ವಾರದ ನಂತರ ನಿಧಿ ಸಂಗ್ರಹ ಕಾರ್ಯ ಆರಂಭಿಸಿತು.

ADVERTISEMENT

ಮಾರ್ಪನಡ್ಕದಿಂದ ಆರಂಭವಾದ ಈ ಅಭಿಯಾನ ಪಂಚಾಯತಿನಾದ್ಯಂತ ವ್ಯಾಪಿಸುತ್ತಿದ್ದಂತೆ ಸಮೀಪದ ಬದಿಯಡ್ಕ, ಬೆಳ್ಳೂರು, ಕಾರಡ್ಕ, ಎಣ್ಮಕಜೆ ಮತ್ತು ಚೆಂಗಳ ಪಂಚಾಯತ್‌ಗಳ ಜನರೂ ಹಣ ಸಂಗ್ರಹಿಸಲು ತೊಡಗಿದರು. ಕುಟುಂಬಶ್ರೀ ಕಾರ್ಯಕರ್ತರು, ಸ್ವಸಹಾಯ ಗುಂಪುಗಳ ಸದಸ್ಯರು, ಕ್ಲಬ್‌ಗಳು, ಸಂಘ ಸಂಸ್ಥೆಗಳು, ಪೊಲೀಸ್ ಠಾಣೆ, ಸರ್ಕಾರಿ ಕಚೇರಿ, ಶಾಲೆ, ಆಸ್ಪತ್ರೆ ಮುಂತಾಗಿ ಎಲ್ಲ ಕಡೆಗಳಲ್ಲಿ ಹಣ ಸಂಗ್ರಹಿಸಲಾಗುತ್ತಿದೆ.

‘100ಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡ ಸಮಿತಿ ಇದು. ಮಳೆಯನ್ನೂ ಲೆಕ್ಕಿಸದೆ ಮನೆಗಳು ಮತ್ತು ಕಚೇರಿಗಳ ಬಾಗಿಲ ಬಳಿಗೆ ಹೋಗಿ ಹಣ ಸಂಗ್ರಹಿಸಲಾಗುತ್ತಿದೆ. ಗರಿಷ್ಠ ₹ 35 ಸಾವಿರ ಕೊಟ್ಟವರು ಇದ್ದಾರೆ. ಬಡತನದಲ್ಲೂ ಊರ ಬಾಲೆಯನ್ನು ಉಳಿಸುವುದಕ್ಕಾಗಿ ದಾನ ಮಾಡಿದವರು ಇದ್ದಾರೆ. ಕೂಲಿ ಮಾಡಿ ಬದುಕುತ್ತಿರುವ ಕುಟುಂಬಕ್ಕೆ ಆಸರೆಯಾಗುವುದು ಊರಿನ ಜವಾಬ್ದಾರಿ ಎಂದುಕೊಂಡು ಹೃದಯವೈಶಾಲ್ಯ ಮೆರೆಯುತ್ತಿದ್ದಾರೆ’ ಎಂದು ಸಮಿತಿಯ ಸಂಚಾಲಕ ರಾಜೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರಿಗೆ ತೊಂದರೆಯಾದಾಗ ಎಲ್ಲವನ್ನು ಮರೆತು ಒಂದಾಗುವ ದೊಡ್ಡ ಗುಣ ಇರುವ ಪಂಚಾಯತ್ ಇದು. ಆದ್ದರಿಂದ ಇದನ್ನು ಸೌಹಾರ್ದ ಪಂಚಾಯತ್ ಎಂದು ಕರೆಯುತ್ತಿದ್ದೇವೆ‘ ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೊಳಿಗೆ ಅಭಿಪ್ರಾಯಪಟ್ಟರು.

ದಾನಿಗಳಿಗೆ ಮಾಹಿತಿ: ಸಾನ್ವಿ ವೈದ್ಯಕೀಯ ಚಿಕಿತ್ಸಾ ಸಮಿತಿ, ಕೇರಳ ಗ್ರಾಮೀಣ ಬ್ಯಾಂಕ್‌. ಖಾತೆ ಸಂಖ್ಯೆ: 40413101052286; ಐಎಫ್ಎಸ್‌ಸಿ: KLGB0040413; ಗೂಗಲ್ ಪೇ: 8921968983

ಅಸ್ತಿ–ಮಜ್ಜೆ ದಾನಕ್ಕೆ ಸಜ್ಜಾದ ಅಕ್ಕ

‘ಜೊತೆಯಲ್ಲಿ ಆಡುವ ತಂಗಿಯ ಜೀವ ಉಳಿಸುವುದಕ್ಕಾಗಿ ಅಸ್ತಿ–ಮಜ್ಜೆ ದಾನ ಮಾಡಲು ಸಹೋದರಿ ತನುಶ್ರೀ ಮುಂದಾಗಿದ್ದಾಳೆ. ಹಣ ಸಂಗ್ರಹ ಆದಕೂಡಲೇ ಬೆಂಗಳೂರಿನಲ್ಲಿ ಚಿಕಿತ್ಸೆ ಆರಂಭವಾಗಲಿದೆ. ಇಬ್ಬರೂ ಅನೇಕ ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಚಿಕಿತ್ಸೆಗೆ ತಗಲುವ ವೆಚ್ಚಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ. ಆದರೆ ಸದ್ಯ ಚಿಕಿತ್ಸಾ ವೆಚ್ಚದ ಮೊತ್ತ ಸಂಗ್ರಹಿಸುವುದು ನಮ್ಮ ಗುರಿ‘ ಎಂದು ಸಮಿತಿಯ ಪ್ರಮುಖರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.