ADVERTISEMENT

ಕೆಂಪುಕಲ್ಲು: ಏಕಗವಾಕ್ಷಿ ವ್ಯವಸ್ಥೆಗೆ ಸೂಚನೆ

ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:39 IST
Last Updated 24 ಜುಲೈ 2025, 5:39 IST
ಕೆಂಪುಕಲ್ಲು ಗಣಿಗಾರಿಕೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡೂರಾವ್ ಉ‍ಪಸ್ಥಿತಿಯಲ್ಲಿ ಸಭೆ ನಡೆಯಿತು
ಕೆಂಪುಕಲ್ಲು ಗಣಿಗಾರಿಕೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡೂರಾವ್ ಉ‍ಪಸ್ಥಿತಿಯಲ್ಲಿ ಸಭೆ ನಡೆಯಿತು   

ಮಂಗಳೂರು: ವಾಣಿಜ್ಯ ಉದ್ದೇಶವಲ್ಲದ ಕೆಂಪುಕಲ್ಲು ಕ್ವಾರಿಗಳಿಗೆ ಅಧಿಕೃತವಾಗಿ ಪರವಾನಗಿ ಕೊಡುವ ವ್ಯವಸ್ಥೆ ಜಾರಿಯಾಗಬೇಕು. ಪರವಾನಗಿ ಪಡೆಯಲು ಏಕಗವಾಕ್ಷಿ ಯೋಜನೆ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನಿನ ಅನ್ವಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ಪೀಕರ್ ಯು.ಟಿ. ಖಾದರ್ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಬದಲಾವಣೆ ತರಬೇಕಾಗಿದೆ. ಸಮಯಮಿತಿಯಲ್ಲಿ ಪರವಾನಗಿ ಕೊಡುವ ಕ್ರಮ ಜಾರಿಯಾಗಬೇಕು. ಜಿಲ್ಲೆಯ ಪ್ರಮುಖ ಕೆಂಪುಕಲ್ಲು ಉತ್ಪಾದಕರೊಂದಿಗೆ ಚರ್ಚೆ ನಡೆಸಿ ವಾರದೊಳಗೆ ಹೊಸ ನೀತಿ ಜಾರಿಗೊಳಿಸಲು ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ಯು.ಟಿ. ಖಾದರ್ ಮಾತನಾಡಿ, ಮಣ್ಣು ಸಮತಟ್ಟು ಸೇರಿದಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 3 ಮೀಟರ್ ಮಾತ್ರ ಆಳಕ್ಕೆ ಡ್ರಿಲ್ ಮಾಡಲು ಅವಕಾಶವಿದ್ದು, ಇದನ್ನ 6 ಮೀಟರ್‌ಗೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ಕೆಲವು ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಕೆಂಪುಕಲ್ಲು ಗಣಿಗಾರಿಕೆಗೆ ಕೆಲವು ನಿರ್ಬಂಧಗಳಿವೆ. ಜಿಲ್ಲೆಯಲ್ಲಿ ಸುಲಭವಾಗಿ ಕೆಂಪುಕಲ್ಲು ಗ್ರಾಹಕರಿಗೆ ದೊರೆಯುವಂತಾಗಬೇಕು. ತೆರಿಗೆಯನ್ನು ಕಡಿಮೆ ಮಾಡಿ, ನಿಯಮ ಬದ್ಧವಾಗಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.