ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕೆಂಪುಕಲ್ಲು ಮತ್ತು ಮರಳು ಗಣಿಗಾರಿಕೆಗೆ ರಾಯಧನ ಹೆಚ್ಚಳ ಮಾಡಿ ಕಠಿಣ ನಿಯಮ ರೂಪಿಸಿರುವುದರಿಂದ ಎದುರಾಗಿರುವ ಕೆಂಪು ಕಲ್ಲು ಹಾಗೂ ಮರಳಿನ ಅಭಾವದ ಸಮಸ್ಯೆಯನ್ನು ರಾಜ್ಯ ಸರ್ಕಾರ ಬಗೆಹರಿಸಿಲ್ಲ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಇಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಹಾರೆ, ಪಿಕಾಸು, ಕೊಡಪಾನ, ಬುಟ್ಟಿ, ಚಟ್ಟಿಗಳನ್ನು ಮುಂದಿಟ್ಟು ಧರಣಿ ನಡೆಸಿದ ಪ್ರತಿಭಟನಾಕಾರರು ಮರಳು ಹಾಗೂ ಕೆಂಪುಕಲ್ಲುಗಳನ್ನೂ ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಹನುಮಾನ್ ಚಾಲಿಸ ಪಠಿಸಿದರು. ಭಜನೆ ಹಾಡುಗಳನ್ನು ಹಾಡಿದರು.
‘ಈ ಹಿಂದೆ ಪ್ರತಿ ಟನ್ ಕೆಂಪು ಕಲ್ಲು ಸಾಗಾಟಕ್ಕೆ ₹97 ರಾಯಧನ ಕಟ್ಟಬೇಕಿತ್ತು. ಈಗ ಅದು ₹282ಕ್ಕೆ ಹೆಚ್ಚಳವಾಗಿದೆ. ಪಕ್ಕದ ಕೇರಳದಲ್ಲಿ ಟನ್‌ಗೆ ₹32 ರಾಯಧನವಿದೆ. ಗಣಿಗಾರಿಕೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ 21 ದಿನಗಳ ಒಳಗೆ ಗಣಿಗಾರಿಕೆ ಇಲಾಖೆಗೆ ಪರವಾನಗಿ ನವೀಕರಿಸಬೇಕೆಂಬ ನಿಯಮವಿದ್ದರೂ, 10 ತಿಂಗಳ ಬಳಿಕವೂ ಪರವಾನಗಿ ನವೀಕರಣ ಆಗುತ್ತಿಲ್ಲ. ಕೆಂಪು ಕಲ್ಲು ಗಣಿಕಾರಿಕೆಯಂತೂ ಸಂಪೂರ್ಣ ಸ್ಥಗಿತಗೊಂಡಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿ.ಆರ್.ಜೆಡ್) ಸಾಂಪ್ರಾದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಲು ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದ ಆರ್ಥಿಕ ವಹಿವಾಟಿಗೂ ಏಟು ಬಿದ್ದಿದೆ. ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಗಮನ ಸಳೆದರೂ ಸಮಸ್ಯೆ ಬಗೆಹರಿದಿಲ್ಲ. ಗಣಿಗಾರಿಕೆ ನಿಯಮ ಸರಳೀಕರಣ ಕುರಿತು ಸಚಿವರು ಹಾಗೂ ವಿಧಾನಸಭಾಧ್ಯಕ್ಷ ಹಲವು ಬಾರಿ ಸಭೆ ನಡೆಸಿದರೂ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಸುಳ್ಳು ಭರವಸೆಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ’ ಎಂದು ದೂರಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ. ಕೆಂಪುಕಲ್ಲು, ಮರಳು ಪೂರೈಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜನಾಂದೋಲನ ರೂಪಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ದಿನೇಶ್ ಗುಂಡೂರಾವ್ ಅವರು ಹೆಸರಿಗೆ ಮಾತ್ರ ಉಸ್ತುವಾರಿ ಸಚಿವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರೇ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೂ ಅವರೇ ಕಾರಣ. ಉಸ್ತುವಾರಿ ಸಚಿವರು ಜಿಲ್ಲೆಯ ಜನಪ್ರತಿನಿಧಿಗಳನ್ನು ಕರೆಸಿ ಸಮಸ್ಯೆ ಆಲಿಸಿಲ್ಲ. ಕೆಂಪು ಕಲ್ಲು ಗಣಿಗರಿಕೆಯನ್ನು ಕಾನೂನು ಬದ್ದಗೊಳಿಸಿಲ್ಲ. ಹಾಗಾಗಿ ಜನ ಕೆಂಪುಕಲ್ಲಿಗೆ ದುಬಾರಿ ದರ ತೆರಬೇಕಾಗಿದೆ’ ಎಂದರು.
ಬಿಜೆಪಿ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ‘ಕೆಂಪುಕಲ್ಲು, ಮರಳು ಪೂರೈಸಲು ಕ್ರಮವಹಿಸುವಂತೆ ಒತ್ತಾಯಿಸಿ ತಾಲ್ಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದೆವು. ಕಾರ್ಮಿಕರು ಈ ಸಮಸ್ಯೆಯಿಂದ ಆತಂಕಿತರಾಗಿದ್ದಾರೆ’ ಎಂದರು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮುಖಂಡರಾದ ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ಲಲ್ಲೇಶ್ ಕುಮಾರ್, ಮೋನಪ್ಪ ಭಂಡಾರಿ, ಕ್ಯಾ.ಗಣೇಶ್ ಕಾರ್ಣಿಕ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ ಮೊದಲಾದವರು ಪಾಲ್ಗೊಂಡಿದ್ದರು.
ಜಿಲ್ಲೆಯ ಕಾರ್ಮಿಕರ ಪಾಲಿಗೆ ಕೆಂಪುಕಲ್ಲು ಮರಳು ಅನ್ನದ ಬಟ್ಟಲಿನಂತೆ. ಇವು ಇಲ್ಲದೇ ಇಲ್ಲಿ ನಿರ್ಮಾಣ ಕಾರ್ಯ ಸ್ತಬ್ಧವಾಗುತ್ತದೆ. ಸರ್ಕಾರದ ನೀತಿಯಿಂದ ಶೇ 75ರಷ್ಟಯ ಕಾರ್ಮಿಕರು ಸಮಸ್ಯೆ ಎದುರಿಸುವಂತಾಗಿದೆ.ಉಮಾನಾಥ ಕೋಟ್ಯಾನ್, ಶಾಸಕ
ಮರಳು ಕೆಂಪುಕಲ್ಲು ಪೂರೈಕೆ ಸ್ಥಗಿತವಾಗುವಂತೆ ಮಾಡಿರುವುದು ಜಿಲ್ಲೆಯ ಜನರ ವಿರುದ್ದದ ಕಾಂಗ್ರೆಸ್ ನಡೆಸುತ್ತಿರುವ ಷಡ್ಯಂತ್ರದ ಭಾಗ. ಹಿಂದೂ ವಿರೋಧಿ ಧೋರಣೆಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನರ ಹೊಟ್ಟೆಗೆ ಹೊಡೆಯುತ್ತಿದೆ.ಡಾ.ವೈ.ಭರತ್ ಶೆಟ್ಟಿ, ಶಾಸಕ
ಜಿಲ್ಲೆಯವರೇ ಆದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ವಿದೇಶ ಸುತ್ತುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈಚೆಗೆ ಜಿಲ್ಲೆಗೇ ಭೇಟಿ ನೀಡುತ್ತಿಲ್ಲ. ಜನರ ಕಷ್ಟಗಳನ್ನು ಕೇಳುವವರಿಲ್ಲದ ಸ್ಥಿತಿ ಇದೆಡಿ.ವೇದವ್ಯಾಸ ಕಾಮತ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.