ಮಂಗಳೂರು: ‘ಜಿಲ್ಲೆಯಲ್ಲಿ ಕೆಂಪುಕಲ್ಲಿನ ಅಭಾವದ ಸಮಸ್ಯೆ ನೀಗಿಸಲು ಸರ್ಕಾರ ಕೆಂಪುಕಲ್ಲು ಪೂರೈಸುವವರ ಜೊತೆ ಸಮಾಲೋಚನೆ ನಡೆಸಿ ಪರಿಷ್ಕೃತ ನಿಯಮಗಳನ್ನು ರೂಪಿಸಿದೆ. ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆಯೂ ಸಿಕ್ಕಿದ್ದು, ಈ ಕುರಿತ ಸಮಸ್ಯೆ ಬಗೆಹರಿದಿದೆ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡುವಂತೆ 53 ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 25 ಮಂದಿಗೆ ಪರವಾನಗಿ ನೀಡಲು ಕ್ರಮವಹಿಸಲಾಗಿದೆ. ಉಳಿದ ಅರ್ಹ ಅರ್ಜಿದಾರರಿಗೂ ಪರವಾನಗಿ ನೀಡಲು ಸರ್ಕಾರ ಕ್ರಮವಹಿಸಿದ್ದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಪರವಾನಗಿ ಲಭಿಸಲಿದೆ. ಇಷ್ಟೆಲ್ಲ ಕಸರತ್ತು ಮಾಡಿದ ಬಳಿಕ ಜನರಿಗೆ ಕೆಂಪುಕಲ್ಲು ಹಿಂದಿಗಿಂತ ಅಗ್ಗದಲ್ಲಿ ಸಿಗಬೇಕು. ಕೆಂಪುಕಲ್ಲು ಪೂರೈಕೆಯಲ್ಲಿ ಪಾರದರ್ಶಕತೆ ತರಲು, ಸ್ಯಾಂಡ್ ಬಜಾರ್ ಆ್ಯಪ್‌ನ ಮಾದರಿಯ ಹೊಸ ಆ್ಯಪ್ ರೂಪಿಸಿದರೆ ಉತ್ತಮ’ ಎಂದರು.
‘ಈ ಬಿಕ್ಕಟ್ಟು ಬಗೆಹರಿದಿರುವ ವಿಚಾರ ಬಿಜೆಪಿ ಶಾಸಕರಿಗೂ ತಿಳಿದಿದೆ. ಈ ಕುರಿತ ಸಮಾಲೋಚನಾ ಸಭೆಗಳಲ್ಲಿ ಜಿಲ್ಲೆಯ ಶಾಸಕರೂ ಭಾಗಿಯಾಗಿದ್ದರು. ಆದರೂ ಅವರು ಏಕೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೊ ತಿಳಿಯದು. ಪ್ರತಿಭಟನೆ ನಡೆಸುವುದು ಅವರ ಹಕ್ಕು, ಅದಕ್ಕೆ ಸರ್ಕಾರ ಸೂಕ್ತ ಉತ್ತರವನ್ನೂ ನೀಡಬಹುದು. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
‘ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಜೆಡ್) ಮರಳುಗಾರಿಕೆಗೆ ಅವಕಾಶ ನೀಡುವ ಬಗ್ಗೆ ಕೇಂದ್ರ ಸರ್ಕಾರ ಕ್ರಮವಹಿಸಬೇಕು. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸರ್ಕಾರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಪೂರೈಸಬೇಕು. ಮಿಕ್ಕ ಮರಳನ್ನು ಖಾಸಗಿಯವರಿಗೆ ನೀಡಲು ಕ್ರಮವಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.