ADVERTISEMENT

ಬರ ಪರಿಹಾರ: ನಾಯಕರು ಉತ್ತರಿಸಲಿ

ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್ ಸವಾಲು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 5:13 IST
Last Updated 30 ಏಪ್ರಿಲ್ 2024, 5:13 IST
ಹರೀಶ್ ಕುಮಾರ್
ಹರೀಶ್ ಕುಮಾರ್   

ಮಂಗಳೂರು: ಸುಪ್ರೀಂ ಕೋರ್ಟ್ ಆದೇಶಿಸಿದ ಮೇಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. ಆದರೆ, ಈ ಹಿಂದೆಯೇ ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಿದೆ ಎನ್ನುತ್ತಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿಧಾನಸಭೆ ವಿರೋಧ ಪಕ್ಷದಲ್ಲಿ ನಾಯಕ ಆರ್. ಅಶೋಕ್ ಈಗ ಉತ್ತರಿಸಲಿ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಕೆ. ಸವಾಲು ಹಾಕಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮೇಲೆ ಕೇಂದ್ರ ಸರ್ಕಾರ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದೆ. ಇಷ್ಟು ದಿನ ಬಿಜೆಪಿಯವರು, ಕೇಂದ್ರ ಹಣ ಬಿಡುಗಡೆ ಮಾಡಿದ್ದರೂ, ರಾಜ್ಯ ಸರ್ಕಾರ ಮರೆಮಾಚುತ್ತಿದೆ ಎಂದು ಆರೋಪಿಸುತ್ತಿದ್ದರು. ಹಾಗಿದ್ದರೆ, ಈ ಹಿಂದೆ ಕೊಟ್ಟ ಹಣ ಯಾವುದು ಎಂದು ಬಹಿರಂಗಪಡಿಸಲಿ’ ಎಂದರು.

‘ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವ ಮೊದಲ ನಿದರ್ಶನ ಇದಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಕ್ಕೂ ತನ್ನ ಪಾಲು ಪಡೆಯಲು ಹಕ್ಕು ಇದೆ ಎಂಬುದನ್ನು ಇದು ಸಾಬೀತುಪಡಿಸಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ತನಗೆ ಹಿನ್ನಡೆ ಆಗಿರುವುದನ್ನು ಅರಿತು, ಎರಡನೇ ಹಂತದ ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಹಣ ಬಿಡುಗಡೆ ಮಾಡಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಮತ್ತು ಮತದ ಮೇಲಿನ ಪ್ರೀತಿಯಿಂದ ಬಿಡುಗಡೆ ಮಾಡಿರುವ ಹಣವಾಗಿದೆ’ ಎಂದು ಟೀಕಿಸಿದರು.

ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೋಹತ್ಯೆ ಖಚಿತ, ಎಸ್ಸಿ, ಒಬಿಸಿ ಮೀಸಲಾತಿ ಬದಲಾವಣೆ ಇಂತಹ ಅನೇಕ ಭಾವನಾತ್ಮಕ ಸಂಗತಿಗಳನ್ನು ಹೇಳುವ ಮೂಲಕ ಜನರನ್ನು ಕೆರಳಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ಇಂತಹ ಸಂಗತಿಗಳನ್ನು ಪ್ರಣಾಳಿಕೆಯಲ್ಲಿ ಹೇಳಿದೆಯೇ, ಹೇಳಿದ್ದರೆ ಆಧಾರ ಒದಗಿಸಲಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಪಕ್ಷ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಸದಾಶಿವ ಉಳ್ಳಾಲ್, ಜಿ.ಎ. ಬಾವ, ಶಶಿಧರ ಹೆಗ್ಡೆ, ಅಶ್ವಿನ್ ಕುಮಾರ್ ರೈ, ಪ್ರತಿಭಾ ಕುಳಾಯಿ, ಶಾಲೆಟ್ ಪಿಂಟೊ, ಮಹಾಬಲ ಮಾರ್ಲ, ಸ್ಟ್ಯಾನಿ ಅಲ್ವಾರಿಸ್, ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ಅಶ್ರಫ್ ಇದ್ದರು.

‘ಎಸ್‌ಡಿಪಿಐ: ಭೇಟಿ ಮಾಡಿಲ್ಲ’ ‘ಇಂಡಿ’ ಒಕ್ಕೂಟದಲ್ಲಿರುವ ಪಕ್ಷಗಳು ಕಾಂಗ್ರೆಸ್‌ಗೆ ಬಹಿರಂಗ ಬೆಂಬಲ ನೀಡಿವೆ. ಎಸ್‌ಡಿಪಿಐ ‘ಇಂಡಿ’ ಒಕ್ಕೂಟಕ್ಕೆ ಸೇರಿರುವ ಪಕ್ಷ ಅಲ್ಲ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾವು ಆ ಪಕ್ಷದ ಪ್ರಮುಖರನ್ನು ಭೇಟಿ ಮಾಡಿಲ್ಲ. ಅವರು ಕೂಡ ನಮಗೆ ಬೆಂಬಲ ನೀಡುವುದಾಗಿ ಹೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಹರೀಶ್ ಕುಮಾರ್ ಉತ್ತರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.