ADVERTISEMENT

ಮತೀಯ ಗೂಂಡಾಗಿರಿ ಪ್ರಕರಣ: ಐವರು ಅಪರಾಧಿಗಳಿಗೆ ದಂಡ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 15:11 IST
Last Updated 11 ಅಕ್ಟೋಬರ್ 2019, 15:11 IST

ಮಂಗಳೂರು: ಅನ್ಯ ಧರ್ಮದ ವಿದ್ಯಾರ್ಥಿನಿ ಜೊತೆ ನಗರದ ಮಾಲ್‌ಗೆ ಬಂದಿದ್ದ ಯುವಕನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಐವರು ಯುವಕರಿಗೆ ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತಲಾ ₹ 21,000 ದಂಡ ವಿಧಿಸಿದೆ.

ಕಾವೂರು ಜ್ಯೋತಿನಗರ ನಿವಾಸಿ ಚೇತನ್ (23), ಶೃಂಗೇರಿ ತಾಲ್ಲೂಕಿನ ನೆಲ್ಲೂರು ನಿವಾಸಿ ರಕ್ಷಿತ್ ಕುಮಾರ್ (21), ನಗರದ ಕಂದುಕ ನಿವಾಸಿ ಅಶ್ವಿನ್‍ರಾಜ್ (21), ಕಾರ್ಕಳ ತಾಲ್ಲೂಕಿನ ಇನ್ನಾ ನಿವಾಸಿ ಸುಶಾಂತ್ ಶೆಟ್ಟಿ (23), ನಗರದ ರಥಬೀದಿ ನಿವಾಸಿ ಶರತ್ ಕುಮಾರ್ (28) ಶಿಕ್ಷೆಗೊಳಗಾದ ಅಪರಾಧಿಗಳು.

2016ರ ಏಪ್ರಿಲ್‌ 2ರಂದು ಉಡುಪಿಯ ಯುವಕನೊಬ್ಬ ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಾರಾಷ್ಟ್ರದ ವಿದ್ಯಾರ್ಥಿನಿ ಜೊತೆ ನಗರಕ್ಕೆ ಬಂದಿದ್ದ. ಫೋರಂ ಫಿಝಾ ಮಾಲ್‌ನಲ್ಲಿ ಇಬ್ಬರೂ ಸಿನಿಮಾ ವೀಕ್ಷಿಸಿದ ಬಳಿಕ ವಾಪಸು ಹೊರಟಿದ್ದರು. ಸ್ಟೇಟ್‌ ಬ್ಯಾಂಕ್‌ ಬಸ್‌ ನಿಲ್ದಾಣಕ್ಕೆ ಹೋಗಲು ಮಾಲ್‌ ಸಮೀಪದ ಆಟೊ ನಿಲ್ದಾಣಕ್ಕೆ ಬಂದಿದ್ದರು.

ADVERTISEMENT

ಆಟೊ ಏರುವಷ್ಟರಲ್ಲಿ ಸ್ಥಳಕ್ಕೆ ಬಂದ ಐವರು ಯುವಕರು ವಿದ್ಯಾರ್ಥಿನಿ ಜೊತೆಗಿದ್ದ ಯುವಕನನ್ನು ಬಲವಂತವಾಗಿ ಎಳೆದೊಯ್ದಿದ್ದರು. ಮಾಲ್‌ ಹಿಂಭಾಗದಲ್ಲಿ ದೇವಸ್ಥಾನವೊಂದಕ್ಕೆ ಹೋಗುವ ಮಾರ್ಗದ ಓಣಿಯಲ್ಲಿ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದರು. ಗಾಬರಿಗೊಂಡ ಯುವತಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಐವರು ಯುವಕರನ್ನು ಬಂಧಿಸಿದ್ದ ದಕ್ಷಿಣ ಠಾಣೆಯ ಆಗಿನ ಇನ್‌ಸ್ಪೆಕ್ಟರ್‌ ಅನಂತಪದ್ಮನಾಭ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 11 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, 17 ದಾಖಲೆಗಳ ಪರಿಶೀಲನೆ ನಡೆಸಿತ್ತು. ಶುಕ್ರವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶೆ ಸಯೀದುನ್ನೀಸಾ ಅವರು, ‘ಐವರು ಯುವಕರು ಅಪರಾಧಿಗಳು’ ಎಂದು ಸಾರಿದರು.

ಅಕ್ರಮ ಕೂಟ ಸೇರಿವುದು, ಹಲ್ಲೆ ನಡೆಸಿರುವುದು, ಮಾರಣಾಂತಿಕ ಆಯುಧ ಬಳಕೆ, ವ್ಯಕ್ತಿಯನ್ನು ಅಕ್ರಮ ಬಂಧನದಲ್ಲಿ ಇರಿಸಿರುವುದು, ಹಲ್ಲೆ ನಡೆಸಿ ಗಾಯಗೊಳಿಸಿರುವುದಕ್ಕೆ ತಲಾ ₹ 21,000 ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ದಂಡ ಪಾವತಿಗೆ ತಪ್ಪಿದಲ್ಲಿ ತಲಾ 8 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದರು. ದಂಡದ ಮೊತ್ತದಲ್ಲಿ ₹ 50,000ವನ್ನು ಹಲ್ಲೆಗೊಳಗಾದ ಯುವಕನಿಗೆ ನೀಡುವಂತೆ ನಿರ್ದೇಶನ ನೀಡಿದರು.

ಯುವತಿಯಿಂದ ಪ್ರತಿಕೂಲ ಸಾಕ್ಷ್ಯ:

ಆರೋಪಿಗಳ ವಿರುದ್ಧ ಕೊಲೆಯತ್ನ ಆರೋಪವನ್ನೂ ಹೊರಿಸಲಾಗಿತ್ತು. ಆದರೆ, ಹಲ್ಲೆಗೊಳಗಾದ ಯುವಕನ ಜೊತೆಗಿದ್ದ ವಿದ್ಯಾರ್ಥಿನಿ ವಿಚಾರಣೆ ವೇಳೆ ಪ್ರತಿಕೂಲ ಸಾಕ್ಷ್ಯ ನುಡಿದಳು. ಇದರಿಂದಾಗಿ ಕೊಲೆಯತ್ನ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.