ADVERTISEMENT

ಕಲೆ, ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಪಡಿಸಬೇಡಿ; ಆಗ್ರಹ

ಜನಾಗ್ರಹ ಸಭೆಯಲ್ಲಿ ವಿಎಚ್‌ಪಿ, ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:33 IST
Last Updated 10 ಸೆಪ್ಟೆಂಬರ್ 2025, 7:33 IST
ಕಾನೂನು ಪಾಲನೆ ನೆಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡಬಾರದು ಎಂದು ಒತ್ತಾಯಿಸಿ ಜಿಲ್ಲೆಯ ಶಾಸಕರ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು
ಕಾನೂನು ಪಾಲನೆ ನೆಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡಬಾರದು ಎಂದು ಒತ್ತಾಯಿಸಿ ಜಿಲ್ಲೆಯ ಶಾಸಕರ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು   

ಮಂಗಳೂರು: ಕಾನೂನು ಸುವ್ಯವಸ್ಥೆ ನೆಪದಲ್ಲಿ ಕಲೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಪಡಿಸಬಾರದು. ಯಕ್ಷಗಾನ, ನಾಟಕ, ದೈವಕೋಲ, ಭರತನಾಟ್ಯ, ಮೊದಲಾದ ಧಾರ್ಮಿಕ– ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊದಲಿನಂತೆ ನಡೆಸಲು ಅನುವು ಮಾಡಿ ಕೊಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿಯವರು ಸರ್ಕಾರವನ್ನು ಆಗ್ರಹಿಸಿದರು.

ಈ ಸಂಘಟನೆಗಳ ಆಶ್ರಯದಲ್ಲಿ‌ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಬೃಹತ್ ಜನಾಗ್ರಹ ಸಭೆಯಲ್ಲಿ ಈ ಕುರಿತ ಮನವಿಯನ್ನು ಶಾಸಕರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಲಾಯಿತು.

ಯಾವುದೇ ಮೆರವಣಿಗಗಳನ್ನು ರಾತ್ರಿ ನಡೆಸಬಾರದೆಂಬ ನಿಯಮಗಳಿಲ್ಲ. ಯಕ್ಷಗಾನ, ನಾಟಕ ಹಾಗೂ ದೈವ ಕೋಲ, ನೇಮಗಳನ್ನು ರಾತ್ರಿಯಿಂದ ಬೆಳಿಗ್ಗೆಯವರೆಗೆ ನಡೆಸುವ ಸಂಪ್ರದಾಯ ಶತಮಾನಗಳಿಂದ ಇದೆ.  ಜನಸಂಖ್ಯೆ ಹೆಚ್ಚಾಗಿದ್ದರಿಂದ ಧ್ವನಿವರ್ಧಕ ಬಳಕೆ ಈಗ ಅನಿವಾರ್ಯ. ರಾತ್ರಿ 10.30ರ ಒಳಗೆ ಕಾರ್ಯಕ್ರಮ ನಿಲ್ಲಿಸಬೇಕು ಮತ್ತು ರಾತ್ರಿ ಧ್ವನಿವರ್ಧಕ ಬಳಸಬಾರದೆಂದು ಷರತ್ತು ವಿಧಿಸಿದರೆ ಇಂತಹ ಕರ್ಯಕ್ರಮಗಳನ್ನೇ ನೆಚ್ಚಿಕೊಂಡು ಬದುಕುವವರಿಗೆ  ಸಮಸ್ಯೆಯಾಗುತ್ತದೆ’ ಎಂದು ಸಭೆಯಲ್ಲಿ ಮಾತನಾಡಿದವರು ಹೇಳಿದರು.
 
ನಿಯಮಗಳನ್ನು ಪುನರ್‌ ರಚಿಸಿ ಹಿಂದಿನಂತೆಯೇ ಕಾರ್ಯಕ್ರಮ, ಮೆರವಣಿಗೆ ನಡೆಸಲು ಅನುವು ಮಾಡಿಕೊಡಬೇಕು. ಅಲ್ಲಿವರೆಗೆ ಈ ನಿಯಮ ಜಾರಿಗೊಳಿಸಬಾರದು.  ದಸರಾ ಸಲುವಾಗಿ ಈ ನಿಯಮಗಳಿಂದ ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಶಬ್ದ ಮಾಲಿನ್ಯ (ನಿರ್ಬಂಧ ಮತ್ತು ನಿಯಂತ್ರಣ) ನಿಯಮ  ರಚನೆಯಾಗಿದ್ದು 2000ರಲ್ಲಿ. ಆ ಬಳಿಕವೂ  ನಮ್ಮ ಜಿಲ್ಲೆಯೂ ಸೇರಿದಂತೆ ದೇಶದ ವಿವಿಧೆಡೆ  ಸಾರ್ವಜನಿಕ ಸಭೆಗಳಾಗಿವೆ. ಲಕ್ಷಾಂತರ ಜನರಿಗೆ ತಲುಪುವಷ್ಟು ಪ್ರಬಲ ಧ್ವನಿವರ್ಧಕಗಳನ್ನು ಬಳಸಲಾಗಿದೆ. 200 ಡಿಸಿಬಲ್‌ನಷ್ಟು ಪ್ರಬಲ ಧ್ವನಿವರ್ಧಕವನ್ನು ಬಳಸಿದರೂ ಅದನ್ನು ನಿಲ್ಲಿಸಲು ಪೊಲೀಸರು ಕ್ರಮಗಳನ್ನು ಕೈಗೊಂಡಿರಲಿಲ್ಲ. ಹಿಂದೂ ಹಬ್ಬಗಳಿಗೆ ಮಾತ್ರ ಈ ನಿಯಮಾಗಳ ಪ್ರಕಾರ ಷರತ್ತು ವಿಧಿಸಲಾಗುತ್ತಿದೆ. ಈ ತಾರತಮ್ಯ ಏಕೆ ’ ಎಂದು ಪ್ರಶ್ನಿಸಿದರು.

ಸಮಿತಿಯ ಸಂಚಾಲಕರಾದ ಎಚ್. ಕೆ.ಪುರುಷೋತ್ತಮ, ಶಿವಾನಂದ ಮೆಂಡನ್, ದೇವದಾಸ್ ಕಾಪಿಕಾಡ್, ಪಟ್ಲ ಸತೀಶ್ ಶೆಟ್ಟಿ, ಧನರಾಜ್ ಶೆಟ್ಟಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ದಯಾನಂದ್ ಕತ್ತಲಸಾರ್, ಮಧು ಬಂಗೇರ, ಪಮ್ಮಿ ಕೊಡಿಯಾಲ್ ಬೈಲ್, ಕಿಶೋರ್ ಡಿ.ಶೆಟ್ಟಿ ಮೊದಲಾದವರು ಸಲ್ಲಿಸಿದ ಮನವಿಯನ್ನು ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗಿರಥಿ ಮುರುಳ್ಯ, ಉಮಾನಾಥ ಕೋಟ್ಯಾನ್ ಸ್ವೀಕರಿಸಿದರು.

ವಿಎಚ್‌ಪಿ ಮುಖಂಡ ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಶರಣ್ ಪಂಪ್ ವೆಲ್, ಪಿ.ಎಸ್.ಪ್ರಕಾಶ್, ಕಟೀಲಿನ  ಹರಿನಾರಾಯಣ ದಾಸ ಆಸ್ರಣ್ಣ, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಅರವಿಂದ ಬೋಳಾರ್, ತುಷಾರ್ ಸುರೇಶ್, ರಾಜೇಶ್ ರೈ, ಡಾ.ಆಶಾ ಜ್ಯೋತಿ ರೈ, ರಾಜಶೇಖರ್‌ ಶೆಟ್ಟಿ ವಿಟ್ಲ, ಲೀಲಾಧರ ಕರ್ಕೇರ, ಗೋಕುಲ್ ಕದ್ರಿ ಕಿರಣ್ ಜೋಗಿ, ಅಣ್ಣು ಪೂಜಾರಿ, ಭಾಸ್ಕರ ಚಂದ್ರ ಶೆಟ್ಟಿ, ಲಕ್ಷ್ಮಣ ಮಲ್ಲೂರು, ಚಂದ್ರಶೇಖರ ಶೆಟ್ಟಿ, ಪೊಳಲಿ ಗಿರೀಶ‌ ತಂತ್ರಿ ಮೊದಲಾದವರು ಭಾಗವಹಿಸಿದರು.

-ಕಾನೂನಿನ ಕಟ್ಟುನಿಟ್ಟು ಅನುಷ್ಠಾನ ಮಾತ್ರದಿಂದ ಜಿಲ್ಲೆಯಲ್ಲಿ ಶಾಂತಿ ನೆಲೆಸಿದ್ದಲ್ಲ ನಾವು ಸಹಕಾರ ಕೊಟ್ಡಿದ್ದರಿಂದ ಜಿಲ್ಲೆ ಶಾಂತವಾಗಿದೆ.. ಜನರ ಅಪೇಕ್ಷೆಯೂ ಇದೇ
-ಶರಣ್ ಪಂಪ್‌ವೆಲ್ ವಿಎಚ್‌ಪಿ ದಕ್ಷಿನ ಪ್ರಾಂತ ಸಹ ಕಾರ್ಯದರ್ಶಿ
ಶಬ್ದ ಮಾಲಿನ್ಯ ವಿಚಾರದಲ್ಲಿ ನಾವೆಲ್ಲ ಆಲೋಚನೆ‌ ಮಾಡಬೇಕು.‌ ಮೆರವಣಿಗೆಯಿಂದ ಬೇರೆಯವರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಕಾನೂನು ಧಾರ್ಮಿಕ ಚೌಕಟ್ಟು ಮತ್ತು ಸಂಸ್ಜೃತಿಗಳೆಲ್ಲವೂ ಅಗತ್ಯ
-ಆಶಾ ಜ್ಯೋತಿ ರೈ ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ
ಕಟೀಲು ಮೇಳದ ಯಕ್ಷಗಾನ ಪ್ರದರ್ಶನಕ್ಕೆ‌ ಅಡ್ಡಿಯಾದಾಗ ಯಾರೂ ನೆರವಿಗೆ ಬರಲಿಲ್ಲ. ಕೋವಿಡ್ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಬೀಗ ಹಾಕಿ ಬಾರ್‌ ತೆರೆದಿಟ್ಟಾಗ ಯಾರೂ ಮಾತನಾಡಲಿಲ್ಲ. ಈಗಲಾದರೂ ಒಗ್ಗಟ್ಟಾಗಿದ್ದು ಒಳ್ಳೆಯದು‌
-ಹರಿನಾರಾಯಣದಾಸ ಆಸ್ರಣ್ಣ ಕಟೀಲು ದೇವಸ್ಥಾನದ ಆನುವಂಶಿಕ ಅರ್ಚಕ
ಶಾಸಕ ಸ್ಥಾನವನ್ನು ಬೇಕಾದರೂ ಬಿಡುತ್ತೇವೆ ಆದರೆ ನಂಬಿಕೆಯನ್ನು ಬಿಟ್ಟುಕೊಡುವುದಿಲ್ಲ‌‌. ಜಿಲ್ಲೆಯ ಸಂಪ್ರದಾಯ ಕಲೆ ಉಳಿಸಲು ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಕಲಾವಿದರನ್ನು ಒಟ್ಟುಸೇರಿಸಿ ಜೊತೆ ಸಭೆ ನಡೆಸುತ್ತೇವೆ.
-ಡಿ.ವೇದವ್ಯಾಸ ಕಾಮತ್‌ ಶಾಸಕ

‘ಪ್ರತ್ಯೇಕ ತುಳು ರಾಜ್ಯವೇ ಪರಿಹಾರ’

ತುಳುನಾಡಿನ ಧಾರ್ಮಿಕ ಶ್ರದ್ಧೆಗೆ ಬ್ರಿಟಿಷರ ಆಳ್ವಿಕೆ ಕಾಲದಲ್ಲೂ ಧಕ್ಕೆ ಆಗಿಲ್ಲ. ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಸಂಸ್ಕೃತಿ ನಾಶ ಆಗಲಿದೆ.  ಪ್ರತ್ಯೇಕ ತುಳು ರಾಜ್ಯ ಆದರೆ ಈದಕ್ಕೆಲ್ಲ ಪರಿಹಾರ ಸಿಗಲಿದೆ’ ಎಂದು ಸಮಿತಿಯ ಸಂಚಾಲಕರಲ್ಲಿ ಒಬ್ಬರಾದ ದಯಾನಂದ ಕತ್ತಲಸಾರ್‌ ಹೇಳಿದರು.

‘ಸುಪ್ರೀಂ ಕೋರ್ಟ್‌ನಲ್ಲೇ ಬಗೆಹರಿಸಬೇಕು’

ಶಬ್ದಮಾಲಿನ್ಯ ತಡೆಯಲು ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಕೇಂದ್ರ ಸರ್ಕಾರಿ ರಚಿಸಿದ ನಿಯಮಗಳಿಂದಾಗಿ ಈ ಸಮಸ್ಯೆ ಎದುರಾಗಿದೆ. ಈ ನಿರ್ಬಂಧ ತೆರವಿನ ಅಗತ್ಯದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ ಅಲ್ಲೇ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಇಲ್ಲದಿದ್ದರೆ ಇನ್ನು ಮುಂದೆ ಬರುವ ಅಧಿಕಾರಿಗಳೂ ಈ ಕಾನೂನು ಜಾರಿಗೆ ಕ್ರಮ ವಹಿಸಲೂಬಹುದು ಎಂದು ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಸಲಹೆ ನೀಡಿದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.