
ಮಂಗಳೂರು: ಧರ್ಮ, ಭಾಷೆ, ಸಂಸ್ಕೃತಿ ಸೇರಿದಂತೆ ನಮ್ಮತನದ ಮೇಲೆ ಪ್ರೀತಿ, ಅಭಿಮಾನ ಇರುವುದು ಸಹಜ, ಅದು ಅಂಧಾಭಿಮಾನವಾಗಿ ಪರಧರ್ಮ, ಇನ್ನೊಂದು ಭಾಷೆ, ಬೇರೆಯವರ ಸಂಸ್ಕೃತಿಯನ್ನು ದ್ವೇಷಿಸುವುದು ತರವಲ್ಲ ಎಂದು ಸಿಆರ್‌ಐ ಅಧ್ಯಕ್ಷ ಫಾ.ಡೊಮಿನಿಕ್ ವಾಜ್ ಹೇಳಿದರು.
'ಅರಿಯಿರಿ ಮನುಕುಲದ ಪ್ರವಾದಿಯನ್ನು' ಎಂಬ ಘೋಷವಾಕ್ಯದೊಂದಿಗೆ ಯುನಿವೆಫ್ ಕರ್ನಾಟಕ ಸಂಘಟನೆ ಆಯೋಜಿಸಿದ್ದ ಪ್ರವಾದಿ ಮಹಮ್ಮದ್ ಅವರ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ತಂತ್ರಜ್ಞಾನ ಅಗಾಧವಾಗಿ ಬೆಳೆದಿರುವ ಇಂದು ಮನುಷ್ಯನಿಗೆ ಹೊಂದಾಣಿಕೆಯಿಂದ ಬದುಕಲು ಸಾಧ್ಯವಾಗದೇ ಇರುವುದು ವಿಚಿತ್ರ ಸನ್ನಿವೇಶ ಎಂದರು.
ಅಸ್ತಿತ್ವವಾದವನ್ನು ಪ್ರಚುರಪಡಿಸಿದ ತತ್ವಜ್ಞಾನಿ ಗ್ಯಾಬ್ರಿಯೆಲ್ ಮಾರ್ಸೆಲ್ ಅವರ ವಾದವನ್ನು ಅನ್ವಯಿಸಿ ಹೇಳುವುದಾದರೆ, ಇಂದಿನ ಕಾಲದಲ್ಲಿ ಹಕ್ಕಿಯಂತೆ ಹಾರಾಡಬಹುದು, ಮೀನಿನಂತೆ ಈಜಾಡಬಹುದು. ಆದರೆ ಹೊಂದಾಣಿಕೆಯ ಬದುಕು ಸಾಧ್ಯವಿಲ್ಲ ಎಂಬಂತಾಗಿದೆ ಎಂದು ಅವರು ಹೇಳಿದರು.
ಶಾಂತಿ ಮತ್ತು ಪ್ರೀತಿಯನ್ನು ಹಂಚುವ ಕ್ರಿಸ್‌ಮಸ್ ಸಂದರ್ಭದಲ್ಲಿ ವಿಶ್ವದ 700ಕ್ಕೂ ಹೆಚ್ಚು ಕಡೆಗಳಲ್ಲಿ ಕ್ರೈಸ್ತರ ಮೇಲೆ ದಾಳಿಗಳಾಗಿವೆ. ಸಾಂತಾಕ್ಲಾಸ್ ವೇಷಧಾರಿ ಮತ್ತು ಕ್ಯಾರಲ್ಸ್ ಹಾಡುವ ಮಕ್ಕಳನ್ನೂ ದಾಳಿಕೋರರು ಬಿಡಲಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ. ನೀಜೀರಿಯಾದಲ್ಲಿ ಮುಸ್ಲಿಂ ಮತ್ತು ಕ್ರೈಸ್ತರು ಹೊಡೆದಾಡುತ್ತಿದ್ದಾರೆ. ಉಕ್ರೇನ್ ಮೇಲೆ ಯುದ್ಧ ಸಾರಲಾಯಿತು. ಕುಟುಂಬಗಳಲ್ಲೂ ಹೊಂದಾಣಿಕೆ ಇಲ್ಲ. ಗಂಡ ಹೆಂಡತಿ ನಡುವೆ ಮಾತು ಇಲ್ಲದ ಎಷ್ಟೋ ಕುಟುಂಬಗಳು ನಮ್ಮ ನಡುವೆ ಇವೆ. ಇಂಥ ದುರಿತ ಕಾಲ ಎದುರಾದಾಗಲೆಲ್ಲ ಪ್ರವಾದಿಯಂಥ ಶಕ್ತಿಗಳು ಉದಯಿಸುತ್ತವೆ. ಭಗವದ್ಗೀತೆಯ ‘ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ’ ಶ್ಲೋಕ ಅದನ್ನೇ ಪ್ರತಿಪಾದಿಸಿದೆ. ಯೇಸುಕ್ರಿಸ್ತ ಕೂಡ ಇಂಥ ಉದ್ದೇಶದಿಂದಲೇ ಭೂಮಿಗೆ ಬಂದವರು ಎಂದು ಡೊಮಿನಿಕ್ ವಾಜ್ ಹೇಳಿದರು.
‘ಪ್ರವಾದಿ ಮಹಮ್ಮದ್ ಅವರ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಗುಂಡು ಮತ್ತು ಹೆಣ್ಣಿನ ನಡುವೆ ಭಾರಿ ಬೇಧವಿತ್ತು. ಹೆಂಡತಿಯನ್ನು ಭೋಗದ ಮತ್ತು ಸುಖ ನೀಡುವ ವಸ್ತು ಎಂದೇ ಕಾಣಲಾಗುತ್ತಿತ್ತು. ಹೆಣ್ಣಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಸುಧಾರಣೆ ತರಲು ಪ್ರವಾದಿ ಪ್ರಯತ್ನಿಸಿದ್ದರು. ಶೋಷಿತ ಜನರ ಬದುಕನ್ನು ನರಕ ಮಾಡುತ್ತಿದ್ದ ಬಡ್ಡಿ ವ್ಯವಸ್ಥೆಯನ್ನು ಅವರು ನಿಲ್ಲಿಸಿದರು. ಶ್ರೀಮಂತರು ಗಳಿಕೆಯಲ್ಲಿ ಒಂದಂಶವನ್ನು ಬಡವರಿಗೆ ಹಂಚಬೇಕು ಎಂಬ ಮಹತ್ವದ ಸಂದೇಶವನ್ನು ನೀಡಿದರು. ಮಾನವೀಯತೆಯನ್ನು ಬೆಳೆಸುವುದು ಅವರ ಮುಖ್ಯ ಆಶಯವಾಗಿತ್ತು’ ಎಂದು ಡೊಮಿನಿಕ್ ಅಭಿಪ್ರಾಯಪಟ್ಟರು.
ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, ಪತ್ರಕರ್ತ ಅಬ್ದುಸ್ಸಲಾಮ್ ಪುತ್ತಿಗೆ, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಜಯಬಸವಾನಂದ ಸ್ಚಾಮೀಜಿ, ಜೆಪ್ಪು ಸದ್ಭಾವನದ ಕಿಶೋರ್ ಭಟ್, ವಕೀಲ ಬಿ.ಇಬ್ರಾಹಿಂ, ಎಸ್ ಡಿಪಿಐ ಜಿಲ್ಲಾ ಘಟಕದ ಉಪಾಧ್ಯಕ್ಷ ಇನಾಸ್ ರಾಡ್ರಿಗಸ್, ಯುನಿವೆಫ್ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಕಾರ್ಯದರ್ಶಿ ಸೈಫುದ್ದೀನ್, ಸಹ ಸಂಚಾಲಕರಾದ ಮೊಹಮ್ಮದ್ ಆಸಿಫ್, ಉಬೈದುಲ್ಲ ಬಂಟ್ವಾಳ ಪಾಲ್ಗೊಂಡಿದ್ದರು. ಅಭಿಯಾನದ ಸಂಚಾಲಕ ಯು.ಕೆ.ಖಾಲಿದ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.