ಪುತ್ತೂರು: ಪರಿಶಿಷ್ಟ ಜಾತಿಯ ಮೊಗೇರ ಸಮುದಾಯದ ಹೆಸರನ್ನು ಬಳಸಿಕೊಂಡು ಹಿಂದುಳಿದ ವರ್ಗಕ್ಕೆ ಸೇರಿದ ಮೀನುಗಾರ ಮೊಗೇರರು ಸರ್ಕಾರಿ ಸೌಲಭ್ಯ ಮತ್ತು ಹುದ್ದೆಗಳನ್ನು ಪಡೆಯುವ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಎಚ್.ಕೆ ಭಟ್ ವರದಿ ಕೈಬಿಟ್ಟು ಜೆ.ಸಿ. ಪ್ರಕಾಶ್ ಅಧ್ಯಯನ ವರದಿ ಜಾರಿಗೊಳಿಸಲು ಸರ್ಕಾರ ಮುಂದಾಗುತ್ತಿದೆ. ಇದರ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಅಶೋಕ್ ಕೊಂಚಾರಿ ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಉತ್ತರ ಕನ್ನಡ ಭಾಗದ ಮೀನುಗಾರ ಮೊಗೇರ ಪರಿಶಿಷ್ಟ ಜಾತಿ ಎಂಬ ಸುಳ್ಳು ದಾಖಲಾತಿ ಪಡೆದು ಮೀಸಲಾತಿ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಮೀನುಗಾರ ಮೊಗೇರರು ಬಾಹ್ಯ ಒತ್ತಡ ಹಾಗೂ ರಾಜಕೀಯ ಒತ್ತಡ ಹೇರಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯುವ ತಂತ್ರ ಅನುಸರಿಸುತ್ತಿದ್ದಾರೆ. ಅವರಿಗೆ ನಮ್ಮ ಮೀಸಲಾತಿ ನೀಡಿದಲ್ಲಿ ದುರುಪಯೋಗವಾಗುವ ಅಪಾಯವಿದೆ ಎಂದು ಅವರು ಹೇಳಿದರು.
ಜೆ.ಸಿ. ಪ್ರಕಾಶ್ ಅಧ್ಯಯನ ಸಮಿತಿಯ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ವರದಿ ಮಾನ್ಯ ಮಾಡಿದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಸುಂದರ ಮೇರ, ಸಂಘದ ಪುತ್ತೂರು ತಾಲ್ಲೂಕು ಸಮಿತಿಯ ಅಧ್ಯಕ್ಷ ಸುಂದರ ಮೊಗೇರ, ಕಾರ್ಯದರ್ಶಿ ಮುಖೇಶ್ ಕೆಮ್ಮಿಂಜೆ, ಖಜಾಂಜಿ ರಾಘವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.