ADVERTISEMENT

ಸಿ.ಎಂ ಮನೆ ಮುಂದೆ ಧರಣಿಗೆ ನಿರ್ಧಾರ: ಷಣ್ಮುಖಯ್ಯ

ಕರ್ನಾಟಕ ನಿವೃತ್ತ ನೌಕರರ ವೇದಿಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 5:36 IST
Last Updated 20 ಅಕ್ಟೋಬರ್ 2025, 5:36 IST
ಮಂಗಳೂರಿನಲ್ಲಿ ನಡೆದ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕಾರ್ಯಕಾರಿ ಸಭೆಯಲ್ಲಿ ಐವನ್ ಡಿಸೋಜ ಮಾತನಾಡಿದರು
ಮಂಗಳೂರಿನಲ್ಲಿ ನಡೆದ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕಾರ್ಯಕಾರಿ ಸಭೆಯಲ್ಲಿ ಐವನ್ ಡಿಸೋಜ ಮಾತನಾಡಿದರು   

ಮಂಗಳೂರು: ‘ನಮಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನವೆಂಬರ್‌ನಲ್ಲಿ ಮೈಸೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿ ಮಾಡಲಿದ್ದೇವೆ. ವಿಧಾನ ಮಂಡಲದ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದು, ಅಲ್ಲಿಗೆ ಪಾದಯಾತ್ರೆ ಕೈಗೊಳ್ಳುತ್ತೇವೆ’ ಎಂದು  ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕೇಂದ್ರ ಸಮಿತಿಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ ಹೇಳಿದರು.

ಕರ್ನಾಟಕ ನಿವೃತ್ತ ನೌಕರರ ವೇದಿಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ 2022ರ ಜುಲೈ 1ರಿಂದ 2024ರ ಜುಲೈ 1ರ ನಡುವೆ ನಿವೃತ್ತರಾದ ಸರ್ಕಾರಿ ನೌಕರರ  ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಅವರು ಮಾತನಾಡಿದರು. 

‘ಇದು ಸರ್ಕಾರ ಮಾಡಿದ ಅನ್ಯಾಯವಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಚ್.ಷಡಕ್ಷರಿ ಮತ್ತು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ 7ನೇ ವೇತನ ಆಯೋಗದ ವರದಿಯನ್ನು ಒಪ್ಪಿದ್ದರಿಂದ ನಮಗೆ ಅನ್ಯಾಯವಾಗಿದೆ’ ಎಂದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ, ‘2022ರ ಜುಲೈ1ರಿಂದ 2024ರ ಜುಲೈ 31ರವರೆಗೆ ನೌಕರರಿಗೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕಾಲ್ಪನಿಕವಾಗಿ ವೇತನ ಪರಿಷ್ಕರಣೆ ಮಾಡಿ ಆದೇಶ ಮಾಡಲಾಗಿದೆ. ಆದರೆ ನಗದು ರೂಪದಲ್ಲಿ ಅದನ್ನು 2024ರ ಆ.1ರಿಂದ ಅನ್ವಯ ಮಾಡುವ ಮೂಲಕ  26,500 ನಿವೃತ್ತ ಸರ್ಕಾರಿ ನೌಕರರಿಗೆ  ತಾರತಮ್ಯವೆಸಗಲಾಗಿದೆ. ಸಂಧ್ಯಾಕಾಲದಲ್ಲಿ ಅವರನ್ನು ಆರ್ಥಿಕ ಸವಲತ್ತಿನಿಂದ ವಂಚಿಸಿದ್ದು ಸರಿಯೇ’ ಎಂದು ಪ್ರಶ್ನಿಸಿದರು. 

ಸಭೆಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಉದ್ಘಾಟಿಸಿದರು. ವೇದಿಕೆಯ ರಾಜ್ಯ ಸಂಚಾಲಕರಾದ ಅಶೋಕ ಎಂ. ಸಜ್ಜನ, ಶಂಕರಪ್ಪ ಲಮಾಣಿ, ಎಸ್.ಬಿ. ಬಿಸೇರೊಟ್ಟಿ, ಮಹಾಂತೇಶ ವಿ. ಹಿರೇಮಠ ಸೇರಿದಂತೆ 31 ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಯಾದಗಿರಿಯ ಭೀಮಣ್ಣ ಪ್ರಾರ್ಥಿಸಿದರು. ವಿಜಯನಗರದ ಹುಳು ಬಸಪ್ಪ ವಂದಿಸಿದರು. ಮಂಡ್ಯದ ನಾರಾಯಣ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.