
ಉಳ್ಳಾಲ: ತಾಲ್ಲೂಕಿನ ಕೊಣಾಜೆ ಗ್ರಾಮದ ಅಸೈಗೊಳಿ ಸಂಪರ್ಕಿಸುವ ಚತುಷ್ಪಥ ರಸ್ತೆಯ ಮೂಲ ನಕಾಶೆಯಲ್ಲಿ ಪರಿವರ್ತನೆ ಮಾಡುವ ಹುನ್ನಾರ ನಡೆಯುತ್ತಿದ್ದು, ಅಲ್ಲದೆ, ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಕೆಲ ತೊಂದರೆಗಳನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯರು ಕೊಣಾಜೆ ಗ್ರಾ.ಪಂ.ಗೆ ಮನವಿ ನೀಡಿದರು.
ಸಾಮಾಜಿಕ ಹೋರಾಟಗಾರ ಅರುಣ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿ, ಚತುಷ್ಪತ ರಸ್ತೆಗಾಗಿ 18 ಮೀಟರ್ ಅಗಲದಷ್ಟು ವಿಸ್ತರಿಸಲು ಈಗಾಗಲೇ ಗುರುತು ಹಾಕಲಾಗಿದ್ದು, ಹಳೆ ಕಟ್ಟಡ ಕೆಡವಲು ಹಾಗೂ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಆದೇಶ ಹೊರಡಿಸಲಾಗಿದೆ. ಈಗ ಕೆಲವರು ತೆರೆಮರೆಯಲ್ಲಿ ಅಡ್ಡಿಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ರಸ್ತೆ ನಿರ್ಮಾಣ ಕಾಮಗಾರಿಯ ವೇಳೆ ನೀರು, ವಿದ್ಯುತ್ ಪೈಪ್ ಮೆಲ್ಭಾಗದಲ್ಲಿಯೇ ಇದ್ದು ರಸ್ತೆ ಕಾಮಗಾರಿಗೆ ಸಮಸ್ಯೆ ಆಗಿದೆ. ಜ.31ರೊಳಗೆ ಅಂಗಡಿಗಳನ್ನು ಖಾಲಿ ಮಾಡುವಂತೆ ಗ್ರಾ.ಪಂ.ನಿಂದ ನೋಟಿಸ್ ನೀಡಿದರೂ, ಕೆಲವರು ಅಂಗಡಿ ಉಳಿಸಲು ಲಾಬಿ ನಡೆಸುತ್ತಿದ್ದಾರೆ. ಹಳೆ ಕಟ್ಟಡ ಉಳಿಸುವ ನೆಪದಲ್ಲಿ ಈ ರಸ್ತೆ ನಿರ್ಮಾಣದ ಮೂಲ ನಕಾಶೆಯಲ್ಲಿ ತಿದ್ದುಪಡಿ ಮಾಡಿ ರಸ್ತೆ ಕಾಮಗಾರಿಗೆ ಕೆಲವೊಂದು ವ್ಯಕ್ತಿಗಳು, ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರಿಗೆ ಬೇಕಾದ ಸೌಕರ್ಯಗಳ ಜತೆಗೆ ಮುಂದೆ ಹೊಸ ಅಂಗಡಿಗಳ ಕಟ್ಟಡಕ್ಕೆ ಯೋಜನೆ ಸಿದ್ಧಪಡಿಸಿ, ಚರಂಡಿ, ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ, ಸುಸಜ್ಜಿತ ಬಸ್ ಹಾಗೂ ಆಟೊ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಬೇಕು. ಮೂಲ ಯೋಜನೆಯ ನಕಾಶೆಯನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿ, ಸ್ಥಳ ಪರಿಶೀಲನೆ ನಡೆಸಬೇಕು. ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಮಾಹಿತಿ ಪಡೆದು ನ್ಯಾಯಲಯದ ಮೊರೆ ಹೋಗಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಸ್ಥಳೀಯರ ಮನವಿಯನ್ನು ಸ್ವೀಕರಿಸಿದ ಕೊಣಾಜೆ ಗ್ರಾಮ ಪಂಚಾಯಿತಿ ಪಿಡಿಒ ರಜನಿ ಗಟ್ಟಿ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ. ಈ ಸಂದರ್ಭ ರಸ್ತೆ ವಿಸ್ತರಣೆಗೊಳ್ಳುತ್ತಿರುವುದರಿಂದ ಅಗತ್ಯ ಜಮೀನು ಒದಗಿಸುವ ಸಂಬಂಧ ರಸ್ತೆ ಬದಿಯಲ್ಲಿರುವ ಕಟ್ಟಡ ತೆರವುಗೊಳಿಸಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಸ್ಥಳೀಯರಾದ ಸುಧಾಕರ್ ಬಿ.ಅಸೈಗೋಳಿ, ಸ್ಟೀವನ್ ರೇಗೊ, ರೊನಾಲ್ಡ್ ಡಿಸೋಜ, ರೋಯ್‌ದಾಸನ್, ರಾಜೇಶ್ ಗಾಣಿಗ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.