ADVERTISEMENT

‘ರಸ್ತೆ ಹೊಂಡ: ದುರಸ್ತಿಗೊಳಿಸದಿದ್ದರೆ ಪ್ರತಿಭಟನೆ’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:53 IST
Last Updated 31 ಅಕ್ಟೋಬರ್ 2025, 5:53 IST
ಸುದ್ದಿಗೋಷ್ಠಿಯಲ್ಲಿ ರಘು ಎಕ್ಕಾರು ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ರಘು ಎಕ್ಕಾರು ಮಾತನಾಡಿದರು   

ಮಂಗಳೂರು: ಮಂಗಳೂರು– ಕಾವೂರು– ಬಜಪೆ– ಕಿನ್ನಿಗೋಳಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶ ದ್ವಾರದಿಂದ ಬಜಪೆವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, 15 ದಿನಗಳೊಳಗೆ ದುರಸ್ತಿ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗಳು ಎಚ್ಚರಿಸಿವೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು, ‘ಮೂಲ್ಕಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯು ಈ ಭಾಗದ ಕೂಲಿಕಾರ್ಮಿಕರು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಧಾರ್ಮಿಕ ಕ್ಷೇತ್ರಗಳು, ಖಾಸಗಿ ನೌಕರರು ಹಾಗೂ ಸರ್ಕಾರಿ ನೌಕರರಿಗೆ ತಮ್ಮ ದಿನನಿತ್ಯದ ಕೆಲಸಕ್ಕೆ ಪ್ರಯಾಣಿಸಲು ಇರುವ ಏಕೈಕ ಸಂಪರ್ಕ ರಸ್ತೆಯಾಗಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ರಸ್ತೆಯೂ ಇದೇ ಆಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೂ, ಸಂಬಂಧಪಟ್ಟ ಇಲಾಖೆ ರಸ್ತೆ ದುರಸ್ತಿ ಮಾಡಿಲ್ಲ ಎಂದರು.

ಗುಂಡಿ ತಪ್ಪಿಸುವ ಭರದಲ್ಲಿ ಕೆಲವು ದ್ವಿಚಕ್ರ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಈ ರಸ್ತೆಯಲ್ಲಿ ಹಲವಾರು ಬಾರಿ ಸಂಚಾರ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೂ ರಸ್ತೆ ಸಮಸ್ಯೆಯನ್ನು ಗಮನಕ್ಕೆ ತರಲಾಗಿದೆ. ದುರಸ್ತಿ ಮಾಡದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಹೇಳಿದರು.

ADVERTISEMENT

ಸದಾಶಿವ ಪಡುಬಿದ್ರಿ, ಕೃಷ್ಣಾನಂದ ಡಿ., ಸರೋಜಿನಿ ಬಂಟ್ವಾಳ, ರುಕ್ಕಯ್ಯ ಅಮೀನ್ ಕರಂಬಾರು, ಗೀತಾ ಕರಂಬಾರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.