ADVERTISEMENT

ಉಜಿರೆ | ರಸ್ತೆ ಬದಿ ಕಸ: ಸಿಸಿಟಿವಿ ಕ್ಯಾಮೆರಾ ನಿಗಾ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 13:34 IST
Last Updated 4 ಮಾರ್ಚ್ 2025, 13:34 IST
ಸಿಸಿಟಿವಿ ಕ್ಯಾಮೆರಾ
ಸಿಸಿಟಿವಿ ಕ್ಯಾಮೆರಾ    

ಉಜಿರೆ: ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಂಡಿ ಅಣೆಕಟ್ಟು, ನೇತ್ರಾವತಿ ನದಿ, ನಿಡ್‌ಗಲ್ ಸೇತುವೆ, ಹಾಗೂ ಅರಣ್ಯ ಪ್ರದೇಶದಲ್ಲಿ ಕಸ ಎಸೆಯುವುದನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಹಾಗೂ ಪಿ.ಡಿ.ಒ. ಗಾಯತ್ರಿ ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಪಂಚಾಯಿತಿ ಆಡಳತಕ್ಕೆ  ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ಮೊಬೈಲ್ ಫೋನ್‌ಗಳಲ್ಲಿ ದಾಖಲಾಗುವುದರಿಂದ ಕಸ ಎಸೆಯುವುದೂ ಸೇರಿ ಕಾನೂನುಬಾಹಿರ ಚಟುವಟಿಕೆ ನಡೆಸುವವರನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ  ಎಂದು ಅವರು ಹೇಳಿದ್ದಾರೆ.

ಮುಂದಿನ ಹಂತದಲ್ಲಿ ಸ್ಮಶಾನ ಹಾಗೂ ಇನ್ನಷ್ಟು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಇಂದಬೆಟ್ಟು: ನೀರಿನ ಸಂಪರ್ಕ ಕಡಿತ

ಉಜಿರೆ: ಇಂದಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡ ಮೊತ್ತದ ನೀರಿನ ಶುಲ್ಕ ಪಾವತಿಸಲು ಬಾಕಿ ಇರುವ ಗ್ರಾಮಸ್ಥರ ನಳದ ಸಂಪರ್ಕ ಕಡಿತಗೊಳಿಸಲಾಗಿದೆ. ಗ್ರಾಮ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಮೊದಲ ಹಂತದಲ್ಲಿ ಲಿಂಗತ್ಯಾರು, ಪಿಚಲಾರು ಪ್ರದೇಶಗಳಲ್ಲಿ ಕೆಲವು ನಳ್ಳಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇಂದಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ನೀರಿನ ಸಂಪರ್ಕ ಇದ್ದು, 7 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತ ಪಾವತಿಸಲು ಬಾಕಿ ಇರುವ ಎಂಟು ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಪಿ.ಡಿ.ಒ. ತಿಳಿಸಿದ್ದಾರೆ.

ಅನುಗ್ರಹ ಪ.ಪೂ ಕಾಲೇಜು: ಕಳ್ಳತನಕ್ಕೆ ಯತ್ನ

ಉಜಿರೆ: ಉಜಿರೆಯ ಅನುಗ್ರಹ ಪದವಿಪೂರ್ವ ಕಾಲೇಜಿನ ಕಾರ್ಯಾಲಯಕ್ಕೆ ಸೋಮವಾರ ತಡ ರಾತ್ರಿ ನುಗ್ಗಿದ ಕಳ್ಳರು,  ಹಣಕ್ಕಾಗಿ ಹುಡುಕಾಡಿ, ಹಣ ಸಿಗದಿದ್ದಾಗ, ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಸಿಸಿಟಿವಿ ಕ್ಯಾಮೆರಾ, ಎನ್.ವಿ.ಆರ್, ಹಾರ್ಡ್‌ಡಿಸ್ಕ್‌ ಕಳವು ಮಾಡಿದ್ದಾರೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.