
ಮಂಗಳೂರು: ಸುರತ್ಕಲ್ ಸಮೀಪದ ಮುಕ್ಕ ಸಸಿಹಿತ್ಲು ರಸ್ತೆಯ ಬಳಿ ಒಂಟಿ ವೃದ್ಧೆ ವಾಸವಿದ್ದ ಮನೆಗೆ ನುಗ್ಗಿ, ವೃದ್ಧೆಯನ್ನು ಬೆದರಿಸಿ ನಗ–ನಗದು ದೋಚಿದ್ದ ಪ್ರಕರಣದ ಆರೋಪಿಗಳನ್ನು ಸುರತ್ಕಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೋಚಿದ್ದ ಚಿನ್ನಾಭರಣ, ದ್ವಿಚಕ್ರ ವಾಹನ ಹಾಗೂ 3 ಮೊಬೈಲ್ ಹಾಗೂ ₹ 3ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಸುರತ್ಕಲ್ ಗುಡ್ಡೆಕೊಪ್ಲ ಶ್ರೀರಾಮ ಭಜನಾ ಮಂದಿರದ ಸಮೀಪದ ನಿವಾಸಿ ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್ ಅಲಿಯಾಸ್ ಶೈನ್ ( 21 ವರ್ಷ), ಬೆಂಗಳೂರಿನ ಯಲಚೇನಹಳ್ಳಿ ಕಾಶಿನಗರದ ವಿನೋದ್ ಅಲಿಯಾಸ್ ಕೋತಿ ಅಲಿಯಾಸ್ ವಿನೋದ್ ಕುಮಾರ್ (33 ), ಬೆಂಗಳೂರು ದಕ್ಷಿಣದ ಉಡಿಪಾಳ್ಯದ ಕನಕಪುರ ಮುಖ್ಯರಸ್ತೆ ಬಳಿಯ ನಿವಾಸಿ ಗಿರೀಶ್ ಅಲಿಯಾಸ್ ಸೈಕಲ್ ಗಿರಿ (28) ಬಂಧಿತರು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ತಿಳಿಸಿದ್ದಾರೆ.
‘ಒಂಟಿ ಮಹಿಳೆ ಜಲಜಾ (85 ವರ್ಷ) ವಾಸವಾಗಿದ್ದ ಮನೆಯ ಹಂಚು ತೆಗೆದು ಡಿ.3ರಂದು ರಾತ್ರಿ 2.30ರ ಸುಮಾರಿಗೆ ಒಳನುಗ್ಗಿದ ಇಬ್ಬರು ಆರೋಪಿಗಳು ‘ಬೊಬ್ಬೆ ಹಾಕಿದರೆ ಸಾಯಿಸುತ್ತೇವೆ’ ಎಂದು ಬೆದರಿಸಿ, 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆಗಳು ಹಾಗೂ ಪರ್ಸ್‌ನಲ್ಲಿದ್ದ ₹ 14 ಸಾವಿರ ನಗದು ದರೋಡೆ ಮಾಡಿದ್ದರು. ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು.
‘ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೃತ್ಯದಲ್ಲಿ ಆರೋಪಿ ಶೈನ್ ಎಚ್. ಪುತ್ರನ್ ಕೈವಾಡದ ಸುಳಿವು ಸಿಕ್ಕಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕಾರ್ಕಳದ ಜೈಸನ್ ಅಲಿಯಾಸ್ ಲೆನ್ಸನ್ ಜೊತೆ ಸೇರಿ ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದ. ದರೋಡೆ ಮಾಡಿದ ಚಿನ್ನವನ್ನು ಬೆಂಗಳೂರಿಗೆ ಒಯ್ದು ಆರೋಪಿಗಳಾದ ಗಿರೀಶ್ ಎಸ್ ಮತ್ತು ವಿನೋದ್ ಕುಮಾರ್‌ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದ.’
‘ಕಳುವಾದ ₹ 4.43 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, 3 ಮೊಬೈಲ್ ಹಾಗೂ ₹ 3 ಸಾವಿರ ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿ ಜೈಸನ್ ತಲೆಮರೆಸಿಕೊಂಡಿದ್ದಾನೆ’ ಎಂದು ಕಮಿಷನರ್ ತಿಳಿಸಿದರು.
ಆರೋಪಿ ಶೈನ್ ಎಚ್. ಪುತ್ರನ್ ಗಾಂಜಾಸೇವನೆ ಪ್ರಕರಣದಲ್ಲೂ ಆರೋಪಿಯಾಗಿದ್ದ. ಆರೋಪಿ ವಿನೋದ್ ಬೆಂಗಳೂರಿನ ಕೆ.ಎಸ್.ಲೇಔಟ್ ಠಾಣೆಯಲ್ಲಿ ರೌಡಿ ಶೀಟರ್. ಆತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೊಲೆ ಸಂಬಂಧ 2, ಕೊಲೆಯತ್ನ ಕುರಿತು 2, ದರೋಡೆ ಕುರಿತು 4, ಬೆದರಿಕೆ ಸಂಬಂಧ 1, ಗಾಂಜಾ ಮಾರಾಟ ಸಂಬಂಧ 1 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ 1 ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿ ಗಿರೀಶ್ ಬೆಂಗಳೂರಿನ ಕಗ್ಗಲಿಪುರ ಠಾಣೆಯ ರೌಡಿಶೀಟರ್. ಬೆಂಗಳೂರು ನಗರದ ವಿವಿಧ ಠಾಣೆಯಲ್ಲಿ ಆತನ ವಿರುದ್ಧ ಕೊಲೆಯತ್ನ ಸಂಬಂಧ 5, ದರೋಡೆ ಸಂಬಂಧ 1, ಹಲ್ಲೆ ಸಂಬಂಧ 3 ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ’ ಎಂದು ಕಮಿಷನರ್ ಅವರು ಮಾಹಿತಿ ನೀಡಿದರು.
ನಗರದ ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಸುರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ ನೇತೃತ್ವದಲ್ಲಿ ನಡೆದ ಆರೋಪಿಗಳ ಪತ್ತೆಕಾರ್ಯದಲ್ಲಿ ಪಿಎಸ್.ಐ ರಘುನಾಯಕ್, ರಾಘವೇಂದ್ರ ನಾಯ್ಕ್, ಎಎಸ್ಐಗಳಾದ ರಾಧಾಕೃಷ್ಣ, ರಾಜೇಶ್ ಆಳ್ವ ಹಾಗೂ ಸಿಬ್ಬಂದಿ ಅಣ್ಣಪ್ಪ, ಉಮೇಶ್, ಅಜಿತ್ ಮ್ಯಾಥ್ಯೂ, ತಿರುಪತಿ, ಕಾರ್ತಿಕ್, ವಿನೋದ್ ನಾಯ್ಕ್, ಸುನೀಲ್ ಕುಸನಾಳ, ಸತೀಶ ಸತ್ತಿಗೇರಿ, ಮಂಜುನಾಥ ಬೊಮ್ಮನಾಳ, ಹನುಮಂತ ಆಲೂರ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.