ಸುಬ್ರಹ್ಮಣ್ಯ: ‘ಕುಕ್ಕೆ ದೇವಸ್ಥಾನದ ಆಡಳಿತ ವ್ಯಾಪ್ತಿಯ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹7.5 ಲಕ್ಷವನ್ನು ದತ್ತಿನಿಧಿಯಾಗಿ ಹಸ್ತಾಂತರಿಸಿದ್ದೇವೆ’ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ಸೋಮವಾರ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಿ ಅವರು ಮಾತನಾಡಿದರು. ‘ದೇವಸ್ಥಾನದಿಂದ ಲಭಿಸುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಅಂಕ ಪಡೆದು ಉನ್ನತಿ ಸಾಧಿಸುವುದರತ್ತ ವಿದ್ಯಾರ್ಥಿಗಳು ಗಮನಹರಿಸಬೇಕು’ ಎಂದರು.
‘ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವುದು ಕೇವಲ ಕಲಿಯುವಿಕೆ ಅಲ್ಲ, ಬದಲಾಗಿ ಇದು ಸುಬ್ರಹ್ಮಣ್ಯನ ಪ್ರಸಾದ ರೂಪಿ ಜ್ಞಾನವಾಗಿದೆ’ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.
‘ಕಳೆದ ವರ್ಷ 226 ಮಂದಿ ಪರೀಕ್ಷೆ ಬರೆದಿದ್ದು ಅವರಲ್ಲಿ ಉತ್ತಮ ಅಂಕ ಗಳಿಸಿದ 163 ಮಂದಿಗೆ ದತ್ತಿನಿಧಿ ವಿತರಿಸಲಾಯಿತು. ರ್‍ಯಾಂಕ್ ಪಡೆದ ದುರ್ಗಾಲಕ್ಷ್ಮಿ ಅವರಿಗೆ ₹10 ಸಾವಿರ, ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ 46 ವಿದ್ಯಾರ್ಥಿಗಳಿಗೆ ₹5 ಸಾವಿರದಂತೆ ದತ್ತಿನಿಧಿ ವಿತರಿಸಲಾಯಿತು’ ಎಂದು ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಪ್ರೌಢಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಗಣೇಶ್.ಪಿ, ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಪ್ರೌಢಶಾಲಾ ಮುಖ್ಯಗುರು ನಂದಾ ಹರೀಶ್, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.