ಮಂಗಳೂರು: ರಬ್ಬರ್ ಧಾರಣೆ ಒಂದು ವಾರದಿಂದ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಸೋಮವಾರ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ‘ಆರ್‌ಎಸ್‌ಎಸ್– 4’ ಗ್ರೇಡ್‌ಗೆ (ರಿಬ್ಬ್‌ಡ್ ಸ್ಮೋಕ್ಡ್ ಶೀಟ್) ಕೆ.ಜಿ.ಗೆ ಗರಿಷ್ಠ ₹208.50 ದರ ದೊರೆತಿದೆ.
ಶನಿವಾರ ಆರ್‌ಎಸ್‌ಎಸ್– 4 ದರ್ಜೆಯ ರಬ್ಬರ್‌ಗೆ ಕೆ.ಜಿ.ಗೆ ₹209 ಧಾರಣೆ ಇತ್ತು. 2024ರ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ₹232 ರವರೆಗೆ ಏರಿಕೆ ಕಂಡಿದ್ದ ಧಾರಣೆ, ನಂತರ ತುಸು ಇಳಿಮುಖವಾಗಿತ್ತು. ಕೆ.ಜಿ.ಗೆ. ಸರಾಸರಿ ₹180ರಿಂದ ₹190 ಇದ್ದ ದರ ಒಂದೂವರೆ ತಿಂಗಳಿನಿಂದ ತುಸು ಏರುಗತಿಯಲ್ಲಿ ಸಾಗಿದ್ದು ₹205 ದಾಟಿತ್ತು.
‘ಮಳೆಗಾಲದಲ್ಲೂ ರಬ್ಬರ್ ಟ್ಯಾಪಿಂಗ್ ಮುಂದುವರಿಸುವ ಬೆಳೆಗಾರರು ಮೇ 15ರಿಂದ ರಬ್ಬರ್ ಮರಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲು ಪ್ರಾರಂಭಿಸುತ್ತಾರೆ. ಈ ಬಾರಿ ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದರೂ, ಸತತ ಮಳೆಯು ಟ್ಯಾಪಿಂಗ್‌ಗೆ ಅಡ್ಡಿಯಾಗಿದೆ. ಹೀಗಾಗಿ, ಮಾರುಕಟ್ಟೆಗೆ ರಬ್ಬರ್ ಶೀಟ್‌ಗಳ ಪೂರೈಕೆ ಕಡಿಮೆಯಾಗಿದೆ’ ಎನ್ನುತ್ತಾರೆ ಬೆಳೆಗಾರ ಮುರಳಿ ಮುಳ್ಳಂಕೊಚ್ಚಿ.
ಮಳೆ ಕಡಿಮೆಯಾಗಿ ಪೂರ್ಣ ಪ್ರಮಾಣದಲ್ಲಿ ಟ್ಯಾಪಿಂಗ್ ಶುರುವಾದರೆ, ಇನ್ನು ಒಂದು ತಿಂಗಳಲ್ಲಿ ಧಾರಣೆಯು ಹಿಂದಿನ ಮಟ್ಟಕ್ಕೆ ಮರಳುವ ಸಾಧ್ಯತೆ ಇದೆ ಎಂದು ಇನ್ನೊಬ್ಬ ಬೆಳೆಗಾರರು ಹೇಳಿದರು.
ದಶಕದ ಹಿಂದೆ ರಬ್ಬರ್ ಧಾರಣೆ ಕೆ.ಜಿ.ಗೆ. ₹245ರವರೆಗೂ ತಲುಪಿತ್ತು. ನಂತರ ಇಳಿಮುಖವಾಗುತ್ತ, ₹120ಕ್ಕೆ ಬಂದು ನಿಂತಿತ್ತು. ರಬ್ಬರ್ ಟ್ಯಾಪಿಂಗ್ ದರ ಹೆಚ್ಚಳ ಆಗಿರುವುದರಿಂದ ಕೆ.ಜಿ.ಗೆ. ₹250 ದರ ಲಭಿಸಿದರೆ ಲಾಭ ಎನ್ನುತ್ತಾರೆ ಬೆಳೆಗಾರರು.
ರಬ್ಬರ್ ಶೀಟ್ ಜತೆಗೆ ಮರಕ್ಕೂ ಒಳ್ಳೆಯ ಧಾರಣೆ ಸಿಗುತ್ತಿದೆ. ಒಂದು ಮರ ಸರಾಸರಿ ₹2 ಸಾವಿರದಿಂದ ₹2250ಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ಕೇರಳ ಹಾಗೂ ದಕ್ಷಿಣ ಕನ್ನಡ ಗಡಿಯ ಅನೇಕ ಬೆಳೆಗಾರರು ಇನ್ನೂ ಟ್ಯಾಪಿಂಗ್ ಮುಂದುವರಿಸಬಹುದಾದ ರಬ್ಬರ್ ಮರಗಳನ್ನೂ ಕಡಿದು ಮಾರುತ್ತಿದ್ದಾರೆ. ಹೀಗಾಗಿ ರಬ್ಬರ್ ಶೀಟ್ ಮಾರುಕಟ್ಟೆಗೆ ಪೂರೈಕೆ ಕಡಿಮೆ ಇದೆ. ಇದು ಕೂಡ ರಬ್ಬರ್ ಧಾರಣೆ ಏರಿಕೆಗೆ ಕಾರಣವಾಗಿರಬಹುದು ಎನ್ನುತ್ತಾರೆ ಬೆಳೆಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.