ಪ್ರಲ್ಹಾದ ಜೋಶಿ
ಮಂಗಳೂರು: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರೀತಿಯ ಅಂಗಡಿ ಬಗ್ಗ ಮಾತನಾಡುತ್ತಾರೆ. ಆದರೆ ರಾಜ್ಯದ ನಾಯಕರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಲ್ಲಿ ಪ್ರೀತಿ ಮಾರಾಟವಾಗುತ್ತಿಲ್ಲ. ಹತ್ಯೆಗಳು ಮಾರಾಟವಾಗುತ್ತಿವೆ. ಅದೀಗ ಆತ್ಮಹತ್ಯೆಯ ಅಂಗಡಿಯಾಗಿದೆ’ ಎಂದು ಕೇಂದ್ರದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು, ಹೊಸ ಮತ್ತು ನವೀಕರಿಸಬಲ್ಲ ಇಂಧನ ಸಚಿವ ಪ್ರಲ್ಹಾದ ವಿ. ಜೋಶಿ ಹೇಳಿದರು.
ಇಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ದುರಾಡಳಿತ ಹಾಗೂ ಭ್ರಷ್ಟಾಚಾರ ತೀವ್ರ ಸ್ವರೂಪ ಪಡೆದಿದೆ. ವಿಧಾನಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯವರು ಗ್ಯಾರಂಟಿ ಯೋಜನೆಯ ಹಣ ಕಟಾಕಟಾ ಎಂದು ಫಲಾನುಭವಿಗಳ ಖಾತೆಗೆ ಹಾಕುತ್ತೇವೆ ಎಂದಿದ್ದರು. ಇಲ್ಲಿನ ನಾಯಕರು ಈಗ ಜನರ ಹಣವನ್ನು ನುಂಗಿ ಹಾಕುತ್ತಿದ್ದಾರೆ. ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪಯೋಜನೆಗೆ (ಎಸ್‌ಪಿ–ಟಿಎಸ್‌ಪಿ) ಮೀಸಲಿಟ್ಟ ಅನುದಾನವನ್ನೂ ಗ್ಯಾರಂಟಿಗೆ ಬಳಸುತ್ತಿದ್ದಾರೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಕಟಾಕಟ್ ತಿಂದು ಹಾಕಿದರು. ರಾಜ್ಯದ ಮುಖ್ಯಮಂತ್ರಿ ಸಹಿತ ಅನೇಕ ಸಚಿವರು ಹಾಗೂ ಮುಖಂಡರು ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ದುರಾಡಳಿತದ ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿದ್ದಾರೆ’ ಎಂದರು.
‘ಮುಡಾ ಹಗರಣದಲ್ಲಿಆರೋಪಿಯು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯ ಪತ್ನಿ ಆಗಿರದಿದ್ದರೆ ಇಷ್ಟು ತ್ವರಿತವಾಗಿ ಕಡತವ ವಿಲೇವಾರಿ ಆಗುತ್ತಿತ್ತೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಗೊತ್ತಿರಲಿಲ್ಲ ಎಂದರೆ ಒಪ್ಪಲಾಗದು ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್ ಆದೇಶದ ಹೊರತಾಗಿಯೂ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೇ, ಭಂಡತನದಿಂದ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪವಿದ್ದರೂ ಅವರ ರಾಜೀನಾಮೆ ಪಡೆಯುತ್ತಾರೆ ಎಂಬ ನಂಬಿಕೆ ನಮಗಿಲ್ಲ. ನಾವು ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟ ನಡೆಸುತ್ತೇವೆ’ ಎಂದರು.
ಕಲಬುರಗಿಯ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯವರು ಅಂಗಿ ಹರಿದುಕೊಂಡರೂ ರಾಜೀನಾಮೆ ನೀಡಲಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಯವತ್ತೂ ರಾಜಕಾರಣದಲ್ಲಿ ಇಷ್ಟು ದುರಹಂಕಾರದ ಹೇಳಿಕೆ ನೀಡಿದ್ದನ್ನು ನೋಡಿಲ್ಲ. ಪ್ರಿಯಾಂಕ್ ಖರ್ಗೆ ಅವರಿಗೆ ದುರಹಂಕಾರ ತಲೆಗೇರಿದೆ. ಅವರಿಗೆ ಜನರೇ ಪಾಠ ಕಲಿಸುತ್ತಾರೆ’ ಎಂದರು.
‘ಬೆಳೆ ವಿಮೆ ಹಾಗೂ ಡಿಎಪಿ ರಸಗೊಬ್ಬರಗಳಿಗೆ ನೀಡುವ ಸಬ್ಸಿಡಿಯನ್ನು ಮುಂದುವರಿಸುವ ಮಹತ್ವ ತೀರ್ಮಾನವನ್ನು ಕೇಂದ್ರ ಸರ್ಕಾರವು ಹೊಸವರ್ಷದ ಆರಂಭದಲ್ಲಿ ಕೈಗೊಂಡಿದೆ. ಬೆಳೆ ವಿಮೆಯ ಸರ್ವೆಯಲ್ಲಿ ಅನುಷ್ಠಾನದಲ್ಲಿ ಕೆಲವೊಂದು ನ್ಯೂನತೆಗಳಿವೆ. ಅದನ್ನು ಸರಿಪಡಿಸಲು ತಂತ್ರಜ್ಞಾನದ ನೆರವಿನಿಂದ ಅದನ್ನು ಸರಿಪಡಿಸಿ ಈ ವ್ಯವಸ್ಥೆಯನ್ನು ಇನ್ನಷ್ಟು ರೈತಸ್ನೇಹಿಯನ್ನಾಗಿಸಲು ಕ್ರಮ ವಹಿಸುತ್ತೇವೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಯತೀಶ್ ಆಳ್ವ, ಸಂಜಯ ಪ್ರಭು, ಪ್ರೇಮಾನಂದ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.